ಕ್ರಿಕೆಟಿಗ ರಾಬಿನ್ ಉತ್ತಪ್ಪ ಡಾನ್ಸ್ ವಿಡಿಯೋ ವೈರಲ್
ಬೆಂಗಳೂರು: ಇತ್ತೀಚೆಗೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಪ್ರತಿನಿಧಿಸಿರುವ ಕರ್ನಾಟಕದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಈಗ ನೃತ್ಯಪಟುವಾಗಿದ್ದಾರೆಯೇ? ಹೀಗೊಂದು ಅನುಮಾನ ಮೂಡಲು ಕಾರಣ ಅವರ ನೃತ್ಯದ ವಿಡಿಯೋ. ಪತ್ನಿ ಶೀತಲ್ ಗೌತಮ್ ಸಹಿತ ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಅವರು ಹೆಜ್ಜೆ ಹಾಕಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಬ್ರಿಟಿಷ್ ರ‌್ಯಾಪರ್‌ಗಳಾದ ಯಂಗ್ ಟಿ ಮತ್ತು ಬುಗ್ಸೆ ಅವರ ಜನಪ್ರಿಯ ಹಾಡು 'ಡೋಂಟ್ ರಷ್'ಗೆ ಉತ್ತಪ್ಪ ಡಾನ್ಸ್ ಮಾಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು, 'ನಿಮ್ಮ ಪತ್ನಿ ನಿಮ್ಮನ್ನು ಮುಜುಗರಕ್ಕೀಡು ಮಾಡಲು ಬಯಸಿದ್ದೇ ಆದರೆ ನೀವು ಆ ಪಾತ್ರಕ್ಕೆ ಬದ್ಧರಾಗಲೇಬೇಕಾಗುತ್ತದೆ' ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದು, ಇದುವರೆಗೆ 1.6 ಲಕ್ಷ ವೀವ್ಸ್ ಪಡೆದುಕೊಂಡಿದೆ. ಚೆನ್ನೈ ಸೂಪರ್‌ಕಿಂಗ್ಸ್ ತಂಡದಲ್ಲಿ ಸಹ-ಆಟಗಾರರಾಗಿರುವ ಋತುರಾಜ್ ಗಾಯಕ್ವಾಡ್ ಕೂಡ ಈ ವಿಡಿಯೋಗೆ ಕಾಮೆಂಟ್ ಹಾಕಿದ್ದು, 'ರಾಬಿ ಭಾಯ್, ನಿಮಗೆ ನಾನು 10ರಲ್ಲಿ 10 ಅಂಕ ನೀಡುವೆ' ಎಂದಿದ್ದಾರೆ. ಕೊಡಗಿನ ಟೆನಿಸ್ ತಾರೆ ರೋಹನ್ ಬೋಪಣ್ಣ 'ಬ್ರಿಲಿಯಂಟ್' ಎಂಬ ಕಾಮೆಂಟ್ ಜತೆಗೆ ನಗುವಿನ ಇಮೋಜಿ ಪ್ರಕಟಿಸಿದ್ದಾರೆ. ಉತ್ತಪ್ಪಗೆ ಇನ್ನು ಸಿನಿಮಾದಲ್ಲೂ ಅವಕಾಶ ಸಿಗಬಹುದು ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
ಸದ್ಯ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕದಿಂದ ಕೇರಳ ತಂಡಕ್ಕೆ ವಲಸೆ ಹೋಗಿರುವ ರಾಬಿನ್ ಉತ್ತಪ್ಪ, ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದಲ್ಲಿದ್ದರೂ ಆಡುವ ಅವಕಾಶ ಪಡೆದಿರಲಿಲ್ಲ. ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ವಿಜಯ್ ಹಜಾರೆ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ರನ್ ಕಲೆಹಾಕಿದ್ದರು.