ಲೋಕೋಪಯೋಗಿ ಕಚೇರಿ ಜಪ್ತಿ; ಅಧಿಕಾರಿಯ ಹೊರಹಾಕಿದ ವಕೀಲ | Dharwad |
ಧಾರವಾಡ ಜಿಲ್ಲೆಯ ಲೋಕೋಪಯೋಗಿ ಕಚೇರಿಯನ್ನು ಜಪ್ತಿ ಮಾಡುವ ವೇಳೆ ಕಾರ್ಯನಿರ್ವಾಹಕ ಅಭಿಯಂತರು ಚೌಡನ್ನವರ ಮತ್ತು ವಕೀಲರ ಮಧ್ಯ ವಾಗ್ವಾದ ನಡೆದಿದೆ. ಕುಂದಗೋಳ ತಾಲೂಕಿನ 19 ಜನ ರೈತರ ಜಮೀನನ್ನು ಮಂಗಸೂಳಿ ಮತ್ತು ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಗಾಗಿ 2010ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಕಳೆದ 10 ವರ್ಷದಿಂದ ರೈತರಿಗೆ ಸೂಕ್ತ ಪರಿಹಾರ ನೀಡದ ಹಿನ್ನಲೆ ರೈತರು ಕೋರ್ಟ್ ಮೊರೆ ಹೋಗಿದ್ದರು. ಇಂದು ಕುಂದಗೋಳದ ದಿವಾಣಿ ನ್ಯಾಯಾಲಯವೂ ಧಾರವಾಡ ಲೋಕೋಪಯೋಗಿ ಇಲಾಖೆಯ ಚೌಡನ್ನವರ ಅವರ ಕಚೇರಿಯನ್ನು ಜಪ್ತಿ ಮಾಡಲು ಆದೇಶ ನೀಡಿತ್ತು. ಆದೇಶದ ಪ್ರತಿ ತೆಗೆದುಕೊಂಡು ವಕೀಲರು ಜಪ್ತಿಗೆ ಹೋದ ಸಂದರ್ಭದಲ್ಲಿ ಎಸ್ ಬಿ ಚೌಡನ್ನವರ ಅವರು ಕುರ್ಚಿ ಬಿಟ್ಟು ಏಳಲಿಲ್ಲ. ಆಗ ಅಧಿಕಾರಿಗಳು ಮತ್ತು ವಕೀಲರ ನಡುವೆ ವಾಗ್ವಾದ ನಡೆಯಿತು. ಆಗ ಅಧಿಕಾರಿಯನ್ನು ಖುರ್ಚಿ ಸಮೇತ ಕಚೇರಿಯಿಂದ ಹೊರಗಡೆ ಎಳೆದು ತಂದು ಜಪ್ತಿ ಮಾಡಲಾಗಿದೆ.