ರಾಜ್ಯ ಸರ್ಕಾರ'ದಿಂದ 'ಕಾಡು ಪ್ರಾಣಿ ದಾಳಿ'ಯಿಂದ ಉಂಟಾಗುವ ಹಾನಿಯ 'ಪರಿಹಾರ ಧನ' ಹೆಚ್ಚಿಸಿ ಆದೇಶ

ರಾಜ್ಯ ಸರ್ಕಾರ'ದಿಂದ 'ಕಾಡು ಪ್ರಾಣಿ ದಾಳಿ'ಯಿಂದ ಉಂಟಾಗುವ ಹಾನಿಯ 'ಪರಿಹಾರ ಧನ' ಹೆಚ್ಚಿಸಿ ಆದೇಶ

ಬೆಂಗಳೂರು: ವನ್ಯಪ್ರಾಣಿಗಳ ದಾಳಿಯಿಂದ  ಉಂಟಾಗುವ ಮಾನವ ಪ್ರಾಣ ಹಾನಿ, ಶಾಶಅವತ ಅಂಗವಿಕಲತೆ, ಭಾಗಶಃ ಶಾಶ್ವತ ಅಂಗವಿಕಲತೆ, ಗಾಯಗೊಂಡವರಿಗೆ, ಆಸ್ತಿ-ಪಾಸ್ತಿ ನಷ್ಟ ಪ್ರಕರಣಗಳಿಗೆ ಪಾವತಿಸುತ್ತಿರುವ ಪರಿಹಾರ ಧನವನ್ನು ( Compensation ) ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಹೊರಡಿಸಿರುವಂತ ನಡವಳಿಯ ಪ್ರತಿ ಕನ್ನಡ ನ್ಯೂಸ್ ನೌಗೆ ದೊರೆತಿದೆ. ಅದರಲ್ಲಿ ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಪ್ರಾಣ ಹಾನಿ, ಶಾಶ್ವತ ಅಂಗವಿಕಲತೆ, ಭಾಗಶಃ ಅಂಗವಿಕಲತೆ, ಗಾಯಗೊಂಡವರಿಗೆ, ಆಸ್ತಿ-ಪಾಸ್ತಿ ನಷ್ಟದ ಪರಿಹಾರ ಧನವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೀಗಿದೆ ಪರಿಷ್ಕೃತ ಪರಿಹಾರ ಧನ

  • ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ ಪ್ರಕರಣಗಳ ಮೊತ್ತವನ್ನು ರೂ.7.50 ಲಕ್ಷದಿಂದ ರೂ.15 ಲಕ್ಷಕ್ಕೆ ಹೆಚ್ಚಿಸಲಾಗಿದೆ.
  • ಕಾಡುಪ್ರಾಣಿಯಿಂದ ಉಂಟಾಗುವ ಶಾಶ್ವತ ಅಂಗವಿಕಲತೆಗೆ ನೀಡುವ ದಯಾತ್ಮಕ ಧನವನ್ನು ರೂ.5 ಲಕ್ಷದಿಂದ ರೂ.10 ಲಕ್ಷಕ್ಕೆ ಹೆಚ್ಚಿಸಲಾಗಿದೆ.
  • ಕಾಡು ಪ್ರಾಣಿಯಿಂದ ಉಂಟಾಗುವ ಭಾಗಶಃ ಶಾಶ್ವತ ಅಂಗವಿಕಲತೆಯ ಪರಿಹಾರ ಹಣವನ್ನು ರೂ.2.50 ಲಕ್ಷದಿಂದ ರೂ.5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
  • ಕಾಡುಪ್ರಾಣಿಗಳಿಂದ ಗಾಯಗೊಂಡ ಪ್ರತಿ ವ್ಯಕ್ತಿಗೆ ನೀಡುವಂತ ಗರಿಷ್ಟ ಮೊತ್ತವನ್ನು ರೂ.30,000ದಿಂದ ರೂ.60,000ಕ್ಕೆ ಹೆಚ್ಚಿಸಲಾಗಿದೆ.
  • ಕಾಡಾನೆ ದಾಳಿಯಿಂದ ಉಂಟಾಗುವ ಆಸ್ತಿ ನಷ್ಟದ ಪ್ರತಿ ಪ್ರಕರಣಕ್ಕೆ ನೀಡಲಾಗುತ್ತಿದ್ದಂತ ರೂ.10,000 ದಯಾತ್ಮಕ ಧನವನ್ನು ರೂ.20,000ಕ್ಕೆ ಏರಿಸಲಾಗಿದೆ.
  • ಇನ್ನೂ ವನ್ಯಪ್ರಾಣಿಗಳ ದಾಳಿ, ಹಾವಳಿಯಿಂದ ಉಂಟಾಗುವ ಮಾನವ-ಪ್ರಾಣ ಹಾನಿ ಪ್ರಕರಣಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಹಾಗೂ ಶಾಶ್ವತ ಅಂಗವಿಕಲತೆಗೊಳಗಾದ ವ್ಯಕ್ತಿಗಳಿಗೆ ನೀಡುತ್ತಿರುವ ಧಯಾತ್ಮಕ ಧನದ ಜೊತೆಗೆ ಪ್ರತಿ ತಿಂಗಳಂತೆ 5 ವರ್ಷಗಳ ವರೆಗೆ ನೀಡಲಾಗುತ್ತಿದ್ದಂತ ಮಾಸಾಶನವನ್ನು ರೂ.2,000ದಿಂದ ರೂ 4,000ಕ್ಕೆ ಹೆಚ್ಚಳ ಮಾಡಲಾಗಿದೆ.

ಅಂದಹಾಗೇ ಸಿಎಂ ಬೊಮ್ಮಾಯಿ ಅವರು 2022-23ನೇ ಸಾಲಿನ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಅಧಿವೇಶನದಲ್ಲಿ ದಿನಾಂಕ 21-09-2022ರಂದು ವನ್ಯಪ್ರಾಣಿ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ಪಾವತಿಸಲಾಗುತ್ತಿರುವಂತ ಪರಿಹಾರ ಧನವನ್ನು ದುಪ್ಪಟ್ಟು ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ಪರಿಹಾರ ಧನವನ್ನು ಪರಿಷ್ಕರಿಸಿ ಆದೇಶಿಸಲಾಗಿದೆ.