ಶಾಸಕರಿಗೆ ಕಾಗೇರಿ ಭಾವನಾತ್ಮಕ ಪಾಠ! ಕಟ್ಟುನಿಟ್ಟಿನಿಂದ ನಡೆಸಲು ಬಿಎಸ್ ವೈಸಲಹೆ: ನಿಯಮಾವಳಿಯಂತೆ ಸದನ ನಡೆಯಲಿ-ಸಿಎಂ

ಶಾಸಕರಿಗೆ ಕಾಗೇರಿ ಭಾವನಾತ್ಮಕ ಪಾಠ! ಕಟ್ಟುನಿಟ್ಟಿನಿಂದ ನಡೆಸಲು ಬಿಎಸ್ ವೈಸಲಹೆ: ನಿಯಮಾವಳಿಯಂತೆ ಸದನ ನಡೆಯಲಿ-ಸಿಎಂ

ಬೆಳಗಾವಿ: ಸದನ ನಿಯಮಾವಳಿ ಪ್ರಕಾರ ನಡೆಯುತ್ತಿಲ್ಲ ಎಂದು ರಮೇಶ್ ಕುಮಾರ್ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು.

ನಿಯಮ 60ರಲ್ಲಿ ಎತ್ತಿಕೊಂಡ ಗಮನ ಸೆಳೆಯುವ ವಿಷಯವನ್ನು 69ಕ್ಕೆ ಬದಲಾವಣೆ ಮಾಡುತ್ತೇವೆ. ಪ್ರಶ್ನೋತ್ತರವನ್ನು ಚರ್ಚೆಗೆ ತೆಗೆದುಕೊಳ್ಳುತ್ತೇವೆ.

ನಿಯಮಾವಳಿ ಪುಸ್ತಕವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಯಾರೂ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಸಭಾಧ್ಯಕ್ಷರು ಏನು ಮಾಡಬೇಕು? ಈ ಅವಧಿಯ 2 ಅಧಿವೇಶನ ಮುಗಿಸಿಕೊಂಡು ಚುನಾವಣೆಗೆ ಹೋಗಬೇಕಾಗಿದೆ. ಈವರೆಗೂ ಸದನದ ನಿಯಮಾವಳಿಗಳನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಿದರು.

ಬಳಿಕ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜನರ ಅಪೇಕ್ಷೆಗಳನ್ನು ಈಡೇರಿಸುವ ದೇಗುಲ ಇದು. ಈ ಬಗ್ಗೆ ಎಲ್ಲರೂ ಒಟ್ಟಿಗೆ ಯೋಚಿಸಬೇಕು. ಮೊದಲ ಬಾರಿಗೆ ಸ್ಪೀಕರ್ ಸಮಾವೇಶ 1921ರಲ್ಲಿ ನೂರು ವರ್ಷಗಳ ಹಿಂದೆ ಶಿಮ್ಲಾದಲ್ಲಿ ನಡೆದಿತ್ತು. ಈ ಬಾರಿ ನವೆಂಬರ್ 16 ರಂದು ಮತ್ತೆ ಶಿಮ್ಲಾದಲ್ಲಿ ನಡೆದ ಸಮಾವೇಶದಲ್ಲಿ ತಾನು ಹಾಗೂ ಪರಿಷತ್ ನ ಸಭಾಪತಿಗಳು ಭಾಗವಹಿಸಿದ್ದೆವು.

ಈ ಸಮಾವೇಶದಲ್ಲಿ ಶಾಸಕರಾಗಿ ಆಯ್ಕೆಯಾದ ಬಂದ ನಂತರ ಸದಸ್ಯರು ಕಡ್ಡಾಯವಾಗಿ ಶಾಸಕರ ತರಬೇತಿಯಲ್ಲಿ ಹಾಜರಾಗಬೇಕು. ಅವರವರ ಪಕ್ಷದ ಶಾಸಕಾಂಗಗಳಲ್ಲಿ ಈ ವ್ಯವಸ್ಥೆಯ ಪ್ರಾಮುಖ್ಯತೆ ತಿಳಿಸುವ ಪ್ರಕ್ರಿಯೆ ನಡೆಯಬೇಕು. ರಾಜಕೀಯ ಪಕ್ಷಗಳಿಗೂ ಈ ವ್ಯವಸ್ಥೆಗೆ ಶಕ್ತಿ ತುಂಬುವ ಜವಾಬ್ದಾರಿ ಇದೆ ಎಂದು ಸಮಾವೇಶದ ಚರ್ಚೆಯ ವಿಚಾರಗಳನ್ನು ಸದನದ ಮುಂದೆ ಇಟ್ಟರು.

ನಂತರ, ಇನ್ನೊಂದು ವರ್ಷಕ್ಕೆ ಚುನಾವಣೆ ಆಗಮಿಸಲಿದೆ. ನಮ್ಮ ಜವಾಬ್ದಾರಿಯನ್ನು ಮರೆತು ಅರಾಜಕತೆ ನಿರ್ಮಾಣ ಮಾಡಿದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಈ ವ್ಯವಸ್ಥೆಯನ್ನು ನಿರ್ಮಿಸಲು ನಮ್ಮ ಹಿರಿಯರು ಎಷ್ಟು ತ್ಯಾಗ ಮಾಡಿದ್ದಾರೆ. ಅತ್ಯಂತ ಹಗರುವಾಗಿ ಈ ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಯನ್ನು ಸ್ವೀಕರಿಸಿಕೊಂಡು ಹಾಗೇ ನಡವಳಿಕೆಯನ್ನು ತೋರಿದರೆ ಮುಂದೆ ಅರಾಜಕತೆ ನಿರ್ಮಾಣವಾಗೋದು ನಿಜ. ಈ ವಿಚಾರವನ್ನು ಬರೆದಿಟ್ಟುಕೊಳ್ಳಿ ಎಂದು ಸದನದ ಸದಸ್ಯರಿಗೆ ಎಚ್ಚರಿಕೆಯನ್ನು ನೀಡಿದರು.

ಈ ಪರಿಸ್ಥಿತಿ ಬರಬಾರದು ಎಂದರೆ ನಮಗೆ ನಾವೇ ಜವಾಬ್ದಾರರಾಗಬೇಕು. ಶಾಸಕಾಂಗ, ಪಕ್ಷಗಳು ಈ ವ್ಯವಸ್ಥೆಯ ಬಗ್ಗೆ ಎಚ್ಚರವಹಿಸಬೇಕು ಹಾಗೂ ಸಮಾಜ ಎಚ್ಚರಿಕೆಯಿಂದ ಇದನ್ನು ನೋಡಬೇಕು. ತಾವು ಆಯ್ಕೆ ಮಾಡಿದ ಶಾಸಕರು ಸದನದಲ್ಲಿ ಏನು ಮಾಡುತ್ತಿದ್ದಾರೆ ಎಂಬುದನ್ನು ಅವಲೋಕನ ಮಾಡುವ ಶಕ್ತಿಯನ್ನು ಜನರು ಸದ್ಯ ಕಳೆದುಕೊಂಡಿದ್ದಾರೆ.

ನಿಯಮಾವಳಿಯಂತೆ ಸದನ ನಡೆಯಬೇಕು: ಮುಖ್ಯಮಂತ್ರಿ ಬೊಮ್ಮಾಯಿ

ಸದನ ಹೇಗೆ ನಡೆಯಬೇಕು ಎಂಬುದರ ಬಗ್ಗೆ ನಿಯಮಾವಳಿ ಪುಸ್ತಕವಿದೆ. ಕಲಾಪಗಳು ಗಂಭೀರವಾಗಿ ನಡೆಯಬೇಕೆಂದರೆ ಅದನ್ನು ಪಾಲಿಸುವುದು ಅತ್ಯಗತ್ಯ ಎಂದು ಮುಖ್ಯಮಂತ್ರಿ ಬಸವರಾಜ ಎಸ್.‌ ಬೊಮ್ಮಾಯಿ ಪ್ರತಿಪಾದಿಸಿದರು. ಸದನ ಸೂಕ್ತರೀತಿಯಲ್ಲಿ ನಡೆಯುವುದರ ಬಗ್ಗೆ ಈಗಾಗಲೇ ಗಂಭೀರ ಚರ್ಚೆಯಾಗಿದೆ. ಕರ್ನಾಟಕದ ಸದನಕ್ಕೆ ಉತ್ತಮ ಪರಂಪರೆ ಇದೆ. ಹೆಚ್ಚು ಸಮಯವನ್ನು ವಿಪಕ್ಷಕ್ಕೆ ನೀಡಬೇಕು. ಹಾಗೆಂದು ಆಡಳಿತಪಕ್ಷದವರು ಮಾತನಾಡಬಾರದು ಎಂದರು. ಸದಸ್ಯರ ಸಂಖ್ಯೆ ಆಧಾರದ ಮೇಲೆ ಪಕ್ಷಕ್ಕೆ ಇಂತಿಷ್ಟು ಎಂದು ಸಮಯ ನೀಡಬೇಕು. ಸಂಸತ್ತಿನಲ್ಲಿಯೂ ಇದೇ ರೀತಿಯ ರೂಲ್‌ ಇದೆ ಎಂದು ವಿವರಿಸಿದರು.

ಶಾಸಕರೆಲ್ಲರಿಗೂ ಕ್ಷೇತ್ರದ ಸಮಸ್ಯೆ ಹೇಳಲು ಅವಕಾಶವಿರಲಿ: ಕೃಷ್ಣಭೈರೇಗೌಡ

ಸದನದಲ್ಲಿ‌ ಖಾಲಿ ಕುರ್ಚಿಗಳೇ ಇರುತ್ತವೆ, ಶಾಸಕರು ಗೈರಾಗ್ತಾರೆ ಅನ್ನುವ ವಿಚಾರ ಚರ್ಚೆಯಾಗುತ್ತದೆ. ಆದರೆ ಅದರ ಅಸಲಿ ಕಾರಣಗಳ ಬಗ್ಗೆ ತಿಳಿಯುವುದು ಅಗತ್ಯ ಎಂದು ಕಾಂಗ್ರೆಸ್‌ ಶಾಸಕ ಕೃಷ್ಣಭೈರೇಗೌಡ ಹೇಳಿದರು.

ಸಭಾಧ್ಯಕ್ಷರು ಭಾವನಾತ್ಮಕವಾಗಿ ಭವಿಷ್ಯದ ದೃಷ್ಟಿಯಿಂದ ಮಾತನಾಡಿದ್ದೀರಿ. ನಿಯಮಗಳಾನುಸಾರ ಚರ್ಚೆ ನಡೆದರೆ ಫಲಪ್ರದಾವಾಗುತ್ತದೆ ನಾವು ಈ ಕಡೆ ಇದ್ದಾಗ ಒಂದು ಮಾತನಾಡ್ತೀವಿ,ಆ ಕಡೆ ಬಂದಾಗ ಒಂದು ಮಾತನಾಡ್ತೀವಿ.. ಕಾಲಮಿತಿ‌ ನಮಗಿದೆ, ಇಷ್ಟೇ ಕಾಲಮಿತಿಯೊಳಗೆ ಹೇಳಿ ಅಂದ್ರೆ ಎಲ್ಲ ಹೇಳೊಕೆ ಆಗಲ್ಲ. ಕಡಿಮೆ ಸಮಯ ಕೊಟ್ಟು ಎಲ್ಲವನ್ನು ಮುಗಿಸಬೇಕು ಅಂದ್ರೆ ಹೇಗೆ? 60 ದಿನ ಅಧಿವೇಶನ ನಡೆಸಬೇಕು ಎಂದು ನಿಯಮ ಮಾಡಿಕೊಂಡಿದ್ದೇವೆ ಆದರೆ ಕೇವಲ 35 ದಿನ ಅಧಿವೇಶನ ನಡೆಸುತ್ತಿದ್ದೇವೆ. ಸಮಯಾವಕಾಶ ಹೆಚ್ಚಿಸಿದರೆ ಸ್ಪೀಕರ್‌ರವರಿಗೂ ಕಲಾಪ‌ ನಡೆಸಲು ಆಗುತ್ತೆ,ನಮಗೂ ಸಮಸ್ಯೆ ಪರಿಹರಿಯುತ್ತೆ ಎಂದ ಅವರು ಇನ್ನೊಂದು ವಾರ ಸದನ ಸಮಯ ವಿಸ್ತರಣೆ ಮಾಡಿ ಎಂದು ಮನವಿ ಮಾಡಿದರು.

ಕಟ್ಟುನಿಟ್ಟಿನಿಂದ ಸದನ ನಡೆಸಿ: ಯಡಿಯೂರಪ್ಪ ಸಲಹೆ

ಎದ್ದು ನಿಲ್ಲುವ ಎಲ್ಲರಿಗೂ ಮಾತನಾಡಲು ಅವಕಾಶ ನೀಡುತ್ತಾ ಹೋದರೆ ಸದನದ ಕಲಾಪದ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಕಟ್ಟುನಿಟ್ಟಿನಿಂದ ಕಲಾಪ ನಡೆಸಿ ಎಂದು ಸಭಾಧ್ಯಕ್ಷರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಸಲಹೆ ನೀಡಿದರು.