ಕುತೂಹಲ ಕೆರಳಿಸಿದ ಬಿಎಸ್‍ವೈ ದೆಹಲಿ ಪ್ರವಾಸ

ಬೆಂಗಳೂರು,ಅ.17- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಳೆ ನವದೆಹಲಿಗೆ ತೆರಳುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಕೇಂದ್ರ ಸಮಿತಿಯ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಸದೀಯ ಮಂಡಳಿಯ ಸದಸ್ಯರೂ ಆಗಿರುವ ಯಡಿಯೂರಪ್ಪನವರು ದೆಹಲಿಗೆ ತೆರಳುತ್ತಿರುವುದು ಸಚಿವ ಆಕಾಂಕ್ಷಿಗಳಲ್ಲಿ ಮತ್ತೆ ನಿರೀಕ್ಷೆಯನ್ನು ಹುಟ್ಟಿಸಿದೆ.
ಪಕ್ಷದ ನೀತಿ, ನಿರ್ಧಾರಗಳನ್ನು ತೀರ್ಮಾನಿಸುವ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯ ಸದಸ್ಯರಾಗಿ ನೇಮಕವಾದ ನಂತರ ಮೊದಲ ಬಾರಿಗೆ ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನಂತರ ಅವರ ಮೊದಲ ಭೇಟಿ ಇದಾಗಿರುವುದರಿಂದ ಸಹಜವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿಯಾಗಿ ಕರ್ನಾಟಕದ ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತಂತೆ ಮಾತುಕತೆ ನಡೆಸುವ ಸಂಭವವಿದೆ.
ಮೂರು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಹೋಗುವುದಾಗಿ ಹೇಳಿದ್ದ ಬೆನ್ನಲ್ಲೇ ಬಿಎಸ್‍ವೈ ಕೂಡ ದೆಹಲಿಗೆ ತೆರಳುತ್ತಿರುವುದು ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಿ ಎಂಬ ಮಾತು ಕೇಳಿಬರುತ್ತಿದೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಬೇಕು. ಇಲ್ಲವೇ ಕೆಲವು ಸಚಿವರನ್ನು ಪಕ್ಷ ಸಂಘಟನೆಗೆ ನಿಯೋಜಿಸಿ ಪುನಾರಚನೆ ಮಾಡಬೇಕು ಎಂದು ಆಕಾಂಕ್ಷಿಗಳು ಒತ್ತಡ ಹಾಕಿದ್ದಾರೆ.
ವಾಸ್ತವವಾಗಿ ಸಚಿವ ಸಂಪುಟ ವಿಸ್ತರಣೆಯಾಗಬೇಕು ಎಂಬುದು ಕಳೆದ ಐದಾರು ತಿಂಗಳ ಬೇಡಿಕೆಯಾಗಿದೆ. ಈ ಕುರಿತು ಸಿಎಂ ಬೊಮ್ಮಾಯಿ ಅವರು ಹಲವು ಬಾರಿ ದೆಹಲಿಗೆ ಹೋಗಿ ಬಂದಿದ್ದರೂ ವರಿಷ್ಠರು ಮಾತ್ರ ಅನುಮತಿ ನೀಡಿರಲಿಲ್ಲ.
ಸಹಜವಾಗಿ ಆಕಾಂಕ್ಷಿಗಳಲ್ಲಿ ಇದು ಅಸಮಾಧಾನವನ್ನುಂಟು ಮಾಡಿತ್ತು. ಪುನಾರಚನೆ ಬದಲು ಖಾಲಿ ಇರುವ ಸ್ಥಾನಗಳನ್ನಾದರೂ ಭರ್ತಿ ಮಾಡಬೇಕೆಂದು ಹಲವರು ಹೇಳುತ್ತಿದ್ದರು. ಸಂಪುಟ ಪುನಾರಚನೆ/ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂಬ ಸಿದ್ದ ಹೇಳಿಕೆಗಳನ್ನು ಕೇಳಿ ಕೇಳಿ ಆಕಾಂಕ್ಷಿಗಳು ಕೂಡ ಸಚಿವ ಸ್ಥಾನದ ಆಸಕ್ತಿಯನ್ನೇ ಕಳೆದುಕೊಂಡಿದ್ದರು.
ಬಿಎಸ್‍ವೈ ಅವರು ದೆಹಲಿಗೆ ತೆರಳಿದ ವೇಳೆ ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆ ಕುರಿತಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಮನವಿ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ವರಿಷ್ಠರು ಅಳೆದು ತೂಗಿ ವಿಸ್ತರಣೆ ಇಲ್ಲವೇ ಪುನಾರಚನೆಗೆ ಸಮ್ಮತಿಸಿದರೆ, ಈ ತಿಂಗಳ ಅಂತ್ಯದೊಳಗೆ ಸಂಪುಟಕ್ಕೆ ಹೊಸ ಮುಖಗಳು ಸೇರ್ಪಡೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅಂತಿಮವಾಗಿ ದೆಹಲಿ ನಾಯಕರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ.