ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ನಿಗೂಢ ನಾಪತ್ತೆ
ಮಂಡ್ಯ: ತಾಲೂಕಿನ ತಂಗಳಗೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಯೊಬ್ಬ ನಿಗೂಢವಾಗಿ ನಾಪತ್ತೆಯಾಗಿ ರುವ ಘಟನೆ ನಡೆದಿದೆ.
ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದ ಈರೇಗೌಡ ಹಾಗೂ ಲೀಲಾ ದಂಪತಿ ಪುತ್ರ ಎಚ್.ಇ. ಕಿಶೋರ್(14) ನಾಪತ್ತೆ ಯಾಗಿರುವ ಬಾಲಕ.
ಘಟನೆ ವಿವರ: ಕಿಶೋರ್ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಈತ ಜು.27 ರಂದು ಊರಿಗೆ ಬಂದಿದ್ದನು. ನಂತರ ತಂದೆ ಈರೇಗೌಡ ಆ.8ರಂದು ವಸತಿ ಶಾಲೆಗೆ ಕರೆ ತಂದಿದ್ದರು. ನಂತರ ಆ.29ರಂದು ಗಣೇ ಶನ ಹಬ್ಬಕ್ಕೆ ಕರೆದು ಕೊಂಡು ಬರಲು ಹೋದಾಗ ಮಗ ಇಲ್ಲದಿರುವು ದನ್ನು ಕಂಡು ಗಾಬರಿಗೊಂಡಿದ್ದಾರೆ. ತಕ್ಷಣ ಪ್ರಾಂಶುಪಾಲ ಹಾಗೂ ಶಿಕ್ಷಕ ರನ್ನು ಪ್ರಶ್ನಿಸಿದಾಗ, “ನಿಮ್ಮ ಮಗ 20 ದಿನಗಳಿಂದ ಶಾಲೆಗೆ ಬಂದಿಲ್ಲ’ ಎಂಬ ಉತ್ತರ ನೀಡಿದ್ದಾರೆ. ಇದರಿಂದ ಪೋಷಕರು ಮತ್ತಷ್ಟು ಆತಂಕಗೊಂಡಿದ್ದಾರೆ.
ಶಾಲೆ ಪ್ರವೇಶಿಸಿರುವ ದೃಶ್ಯ ಸೆರೆ: ಬಾಲಕ ನಾಪತ್ತೆ ಯಾಗಿ 25 ದಿನ ಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ. ಕಿಶೋರ್ ಶಾಲೆಯ ಕ್ಯಾಂಪಸ್ ಪ್ರವೇಶಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಹೊರ ಹೋಗುವ ದೃಶ್ಯವೇ ಇಲ್ಲವಾಗಿದೆ. ಇದ ರಿಂದ ಶಾಲೆಯ ಪ್ರಾಂಶುಪಾಲ ಹಾಗೂ ಶಿಕ್ಷಕರು ತಬ್ಬಿಬ್ಟಾಗಿದ್ದಾರೆ.
ಪೋಷಕರಿಗೆ ತಿಳಿಸದ ಶಿಕ್ಷಕರು: 20 ದಿನಗಳಿಂದ ವಿದ್ಯಾರ್ಥಿ ಶಾಲೆಗೆ ಬಾರದಿದ್ದರೂ ಪೋಷಕರಿಗೆ ಶಿಕ್ಷಕರು ತಿಳಿಸದೇ ನಿರ್ಲಕ್ಷ್ಯ ವಹಿಸಿ ದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಹೋಗಿ ಆತನ ಕೊಠಡಿ ಪರಿಶೀಲಿಸಿದಾಗ ವಿದ್ಯಾರ್ಥಿಯ ಬಟ್ಟೆ, ಬುಕ್ ಇವೆ. ಆದರೆ, ನಮ್ಮ ಮಗ ಮಾತ್ರ ಇಲ್ಲ ಎಂದು ಪೋಷಕರು ತಿಳಿಸಿದ್ದಾರೆ.
ನಮ್ಮ ಮಗ ಬರೆದ ಪತ್ರವಲ್ಲ: ವಿದ್ಯಾರ್ಥಿಗಳ ಕೊಠಡಿಯಲ್ಲಿ ಕಿಶೋರ್ ಬರೆದಿಟ್ಟಿದ್ದ ಎನ್ನಲಾದ ಪತ್ರ ಸಿಕ್ಕಿದೆ. ಪತ್ರದಲ್ಲಿ “ಈ ಶಾಲೆ ಯಲ್ಲಿ ಓದಲು ಇಷ್ಟವಿಲ್ಲ. ಇದನ್ನು ಸಾಕಷ್ಟು ಸಲ ಹೇಳಲು ಪ್ರಯತ್ನಿ ಸಿದ್ದೇನೆ. ಅಪ್ಪ, ಚಿಕ್ಕಪ್ಪ ದಯವಿಟ್ಟು ನನ್ನನ್ನು ಹುಡುಕಬೇಡಿ’ ಎಂದು ಬರೆದಿದ್ದಾನೆ. ಆದರೆ, ಅದು ನನ್ನ ಮಗ ಬರೆದ ಪತ್ರ ಅಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ.
ಪೊಲೀಸರಿಗೆ ತಲೆ ನೋವಾದ ಪ್ರಕರಣ: ಬಾಲಕ ನಿಗೂಢವಾಗಿ ನಾಪತ್ತೆಯಾಗಿರುವ ಹಿನ್ನೆಲೆ ಮಂಡ್ಯ ತಾಲೂಕಿನ ಕೆರೆಗೋಡು ಠಾಣೆ ಯಲ್ಲಿ ದೂರು ದಾಖಲಾಗಿದೆ. ಇದು ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿದೆ. 25 ದಿನಗಳಾದರೂ ವಿದ್ಯಾರ್ಥಿ ಸುಳಿವು ಸಿಕ್ಕಿಲ್ಲ. ಹೊರ ಹೋಗಿರುವ ಬಗ್ಗೆ ಸಿಸಿಟಿವಿ ಯಲ್ಲಿ ಸೆರೆಯಾಗಿಲ್ಲದ ಕಾರಣ ಪ್ರಕರಣ ಹಲವು ಅನುಮಾನ ಹುಟ್ಟು ಹಾಕಿದೆ.
ವಾರದೊಳಗೆ ಮಾಹಿತಿ ಸಿಗುವ ನಿರೀಕ್ಷೆ:ಪ್ರಾಂಶುಪಾಲ ಲೋಕೇಶ್ : ವಿದ್ಯಾರ್ಥಿ ನಾಪತ್ತೆಯಾದ ಮಾಹಿತಿ ಬಂದ ತಕ್ಷಣ ಪೊಲೀಸರಿಗೆ ದೂರು ನೀಡಿ ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಆತ, ತರಗತಿಗೆ ಬಾರದೆ ಎಲ್ಲಿಗೋ ಹೋಗಿದ್ದಾನೆ. ಅಲ್ಲದೆ, ಆತನೇ ಪತ್ರ ಬರೆದಿರುವುದು ಖಚಿತವಾಗಿದೆ. ಅದನ್ನು ತರಗತಿ ಶಿಕ್ಷಕರು ಗುರುತಿಸಿದ್ದಾರೆ. ಹಾಸ್ಟೆಲ್ ವಾರ್ಡನ್ ಸೇರಿ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, ಆತನ ಪೋಷಕರೂ ವಿದ್ಯಾರ್ಥಿಗೆ ಹೊಡೆಯುತ್ತಿದ್ದರು ಎಂದು ಸಂಬಂಧಿ ಕರೇ ತಿಳಿಸಿದ್ದಾರೆ. ಈ ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಾರದೊಳಗೆ ಮಾಹಿತಿ ಸಿಗುವ ನಿರೀಕ್ಷೆ ಇದೆ ಎಂದು ತಂಗಳಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಲೋಕೇಶ್ ತಿಳಿಸಿದ್ದಾರೆ.
ವರದಿ ನೀಡಲು ಡೀಸಿ ಸೂಚನೆ : ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರು, ಶಿಕ್ಷಕರ ನಿರ್ಲಕ್ಷ್ಯ ಕಂಡು ಬಂದಿದೆ. ಕಳೆದ 2 ದಿನಗಳ ಹಿಂದೆ ನನಗೆ ಮಾಹಿತಿ ಬಂದಿದೆ. ಈಗಾಗಲೇ ಶಿಕ್ಷಣ ಇಲಾಖೆ ಉಪನಿರ್ದೇ ಶಕರಿಗೆ ಸೂಚನೆ ನೀಡಿದ್ದು, ವರದಿ ಬಂದ ನಂತರ, ತಪ್ಪುಗಳನ್ನು ಪರಾಮರ್ಶಿಸಿ ಅಮಾನತಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಮಾಹಿತಿ ನೀಡಿದ್ದಾರೆ. ಪತ್ರ
ಬರೆದಿದ್ದು ನನ್ನ ಮಗ ಅಲ್ಲ: ನನ್ನ ಮಗ ನಾಪತ್ತೆಯಾಗಿ ಸುಮಾರು ಒಂದು ತಿಂಗಳೇ ಕಳೆಯುತ್ತಿದೆ. ಆದರೆ, ಇದುವರೆಗೂ ಮಗನ ನಾಪತ್ತೆ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಂಬಂಧ ಪೊಲೀಸರೂ ಯಾವುದೇ ಮಾಹಿತಿ ನೀಡುತ್ತಿಲ್ಲ. ಕೇಳಿದರೆ, ಹುಡುಕುತ್ತಿದ್ದೇವೆ ಎನ್ನುತ್ತಾರೆ. ಅಲ್ಲದೆ, ಪತ್ರ ಸಿಕ್ಕಿರುವುದು ನನ್ನ ಮಗ ಬರೆದ ಪತ್ರವಲ್ಲ ಎಂದು ವಿದ್ಯಾರ್ಥಿಯ ತಂದೆ ಈರೇಗೌಡ ತಿಳಿಸಿದ್ದಾರೆ.