ಗೋವಾಕ್ಕೆ 'ಗೋ ಮಾಂಸ' ರಫ್ತು ಮಾಡುವವರ ವಿರುದ್ಧ ಕಾನೂನು ಕ್ರಮ : ಸಚಿವ ಪ್ರಭು ಚೌಹಾಣ್ ಎಚ್ಚರಿಕೆ

ಬೆಂಗಳೂರು : ಗೋವಾಕ್ಕೆ ಗೋ ಮಾಂಸ ರಫ್ತು ಮಾಡುತ್ತಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ 1,329 ಪ್ರಕರಣ ದಾಖಲಾಗಿದ್ದು, 10 ಸಾವಿರ ಹಸು ಗಳ ರಕ್ಷಣೆ ಮಾಡಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಹರೀಶ್ ಕುಮಾರ್ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯಲ್ಲಿ ಜಾನುವಾರು ಮಾಂಸ ರಫ್ತು ಮಾಡುವ ಅಂಕಿಅಂಶ ಮಾಹಿತಿಗಳನ್ನು ನಿರ್ವಹಣೆ ಮಾಡುವುದಿಲ್ಲ ಎಂದರು. ದನದ ಮಾಂಸ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಗೋವಾ ವಿಧಾನಸಭೆಯಲ್ಲಿ ಪ್ರತಿದಿನ 2 ಟನ್ ಮಾಂಸ ಪೂರೈಕೆಯಾಗುತ್ತಿದೆ ಎಂದು ಅಲ್ಲಿನ ಸದಸ್ಯರು ತಿಳಿಸಿದ್ದಾರೆ. ಆ ಮಾಂಸ ಬೆಳಗಾವಿಯಿಂದಲೇ ಸರಬರಾಜು ಆಗುತ್ತಿದೆ. ಸರ್ಕಾರ ಬೇಕಂತಲೇ ಈ ಮಾಹಿತಿ ಮುಚ್ಚಿಡುತ್ತಿದೆ ಎಂದು ಕಲಾಪದಲ್ಲಿ ಹರೀಶ್ ಕುಮಾರ್ ಕಿಡಿಕಾರಿದರು.ರಾಜ್ಯದಿಂದ ಗೋವಾಕ್ಕೆ ಗೋ ಮಾಂಸ ಕಳುಹಿಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವ ರಾಜ್ಯ ಸರ್ಕಾರ ಇದಕ್ಕೆ ಸಂಬಂಧಪಟ್ಟಂತಹ ಅಂಕಿ ಅಂಶಗಳನ್ನು ನೀಡಲು ಹಿಂದೇಟು ಹಾಕಿದೆ.