ಅಮಿತ್ ಶಾ ಒಂದೇ ಒಂದು ಎಚ್ಚರಿಕೆಗೆ ರಾಜ್ಯ ಬಿಜೆಪಿ ನಾಯಕರು ಫುಲ್ ಅಲರ್ಟ್

ಬಿಜೆಪಿ - ಕಾಂಗ್ರೆಸ್ ಕೆಸರೆರಚಾಟಕ್ಕೆ ಕಾರಣವಾಗಿರುವ ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿಯ ಕೇಂದ್ರದ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆನ್ನಿಗೆ ನಿಂತಿದ್ದಾರೆ. ಇದು ಒಂದು ರೀತಿಯಲ್ಲಿ ಬೊಮ್ಮಾಯಿಯವರಿಗೆ ಆನೆಬಲ ಬಂದಂತಾಗಿದೆ.
ಇತ್ತೀಚಿನ ನವದೆಹಲಿ ಪ್ರವಾಸದ ವೇಳೆ, ಸಿಎಂ ಬೊಮ್ಮಾಯಿಯವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ದರು.
ಆಡಳಿತದ ಕಡೆ ಗಮನಕೊಡಿ, ಪಕ್ಷದೊಳಗಿನ ವಿಘ್ನಸಂತೋಷಿಗಳನ್ನು ನಾವು ಹುಡುಕಿ ವಿಚಾರಿಸಿಕೊಳ್ಳುತ್ತೇವೆ ಎನ್ನುವ ಭರವಸೆ ಸಿಎಂ ಬೊಮ್ಮಾಯಿಯವರಿಗೆ ಬಿಜೆಪಿ ಹೈಕಮಾಂಡಿನಿಂದ ಸಿಕ್ಕಿದೆ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಅದರಂತೇ, ಬಿಜೆಪಿಯ ವರಿಷ್ಠರು ತಮ್ಮದೇ ಸೀಕ್ರಿಟ್ ಏಜೆಂಟುಗಳನ್ನು ಈ ಕೆಲಸಕ್ಕೆ ಬಿಟ್ಟಿದ್ದಾರೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.
ಇಷ್ಟೆಲ್ಲಾ ವರಿಷ್ಠರಿಂದ ಬೆಂಬಲ ಸಿಕ್ಕರೂ, ಬಿಟ್ ಕಾಯಿನ್ ವಿಚಾರದಲ್ಲಿ ಸಿಎಂ ಬೊಮ್ಮಾಯಿಗೆ ಒಂದು ನೋವು ಕಾಡುತ್ತಲೇ ಇದೆ. ಅದನ್ನು, ತಿರುಪತಿಯಲ್ಲಿ ಭಾನುವಾರ (ನ 14) ನಡೆದ ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಗೆ ಆಗಮಿಸಿದ್ದ ಅಮಿತ್ ಶಾ ಅವರ ಬಳಿ ತೋಡಿಕೊಂಡಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅಮಿತ್ ಶಾ, ರಾಜ್ಯ ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶದ ಮೂಲಕ ಎಚ್ಚರಿಕೆಯನ್ನೂ ನೀಡಿದ್ದಾರೆ.
ಯಡಿಯೂರಪ್ಪ 4ನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿಕೊಂಡ ಆರಂಭದ ದಿನಗಳುಯಡಿಯೂರಪ್ಪನವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದ ಆರಂಭದ ದಿನಗಳಲ್ಲಿ ಮೊದಲು ಪ್ರವಾಹ ಮತ್ತು ಇದಾದ ನಂತರ ಕೊರೊನಾ ಮೊದಲನೇ ಅಲೆಯ ಹಾವಳಿ ಆರಂಭವಾಗಿತ್ತು. ಕೊರೊನಾ ನಿರ್ವಹಣೆಯ ವಿಚಾರದಲ್ಲಿ ರಾಜ್ಯದಲ್ಲಿ ಭಾರೀ ಸುದ್ದಿಯಾಗಿದ್ದದ್ದು ಕೋವಿಡ್ ಪರಿಕರ ಖರೀದಿ ವಿಚಾರದಲ್ಲಿ ನಡೆದಿದೆ ಎನ್ನಲಾಗುತ್ತಿದ್ದ ಅವ್ಯವಹಾರಗಳು. ವಿರೋಧ ಪಕ್ಷಗಳು ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್, ಸದನದ ಒಳಗೆ, ಹೊರಗೆ ಬಿಜೆಪಿಯನ್ನು ಬೆಂಡೆತ್ತುತ್ತಿದ್ದಾಗ, ಯಡಿಯೂರಪ್ಪನವರ ಸಮರ್ಥನೆಗೆ ಯಾರೂ ಬಂದಿರಲಿಲ್ಲ. ಎಲ್ಲೋ, ನಾಲ್ಕೈದು ಸಚಿವರು ಬಿಎಸ್ವೈ ಸಮರ್ಥನೆಗೆ ನಿಂತಿದ್ದರು ಅಷ್ಟೇ..
ಪ್ರಕರಣದ ಸೂಕ್ಷ್ಮತೆಯನ್ನು ಅರಿತ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ
ಆ ವೇಳೆಯೂ, ಎಲ್ಲಾ ಸಚಿವರು ಸರಕಾರದ ಸಮರ್ಥನೆಗೆ ನಿಲ್ಲುತ್ತಿಲ್ಲ ಎನ್ನುವ ನೋವನ್ನು ಬಿಎಸ್ವೈ ತಮ್ಮಾಪ್ತರ ಬಳಿ ಮತ್ತು ಬಿಜೆಪಿ ವರಿಷ್ಠರ ಬಳಿ ತೋಡಿಕೊಂಡಿದ್ದರು. ಆಗ, ವರಿಷ್ಠರಿಂದ ಯಡಿಯೂರಪ್ಪನವರಿಗೆ ನಿರೀಕ್ಷಿಸಿದ ಸಹಕಾರ ಸಿಕ್ಕಿರಲಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಅದೇ ದಾಟಿಯಲ್ಲಿ ಈಗ ಬಿಟ್ ಕಾಯಿನ್ ಪ್ರಕರಣ ನಡೆಯುತ್ತಿದೆ ಎಂದು ಬೊಮ್ಮಾಯಿಯವರು, ಪಕ್ಷದ ಹೈಕಮಾಂಡಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರಕರಣದ ಸೂಕ್ಷ್ಮತೆಯನ್ನು ಅರಿತ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಈ ವಿಚಾರದಲ್ಲಿ ಈಗ ಮಧ್ಯಪ್ರವೇಶಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಬಿಟ್ ಕಾಯಿನ್ ಗೊಂದಲ ಮುಂದುವರಿದರೆ ಅದರ ಸ್ಪಷ್ಟ ಲಾಭವನ್ನು ಕಾಂಗ್ರೆಸ್ಸಿಗೆ
ಬಿಟ್ ಕಾಯಿನ್ ಗೊಂದಲ ಮುಂದುವರಿದರೆ ಅದರ ಸ್ಪಷ್ಟ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳುತ್ತದೆ ಎನ್ನುವುದನ್ನು ಅರಿತ ಬಿಜೆಪಿ ಹೈಕಮಾಂಡ್, ಈ ಕೂಡಲೇ ಸರಕಾರದ ಸಮರ್ಥನೆಗೆ ನಿಲ್ಲಬೇಕು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಮುಖಾಂತರ ಎಲ್ಲಾ ರಾಜ್ಯದ ನಾಯಕರಿಗೆ ಸೂಚಿಸಿದೆ. ಯಡಿಯೂರಪ್ಪನವರನ್ನು ಹಣೆಯಲು ಯಾವಯಾವ ಪಾತ್ರಧಾರಿಗಳು ಇದ್ದಾರೋ, ಬೊಮ್ಮಾಯಿಯವರ ಕಾಲದಲ್ಲೂ ಅದೇ ಪಾತ್ರಧಾರಿಗಳು ಮುಂದುವರಿದಿದ್ದಾರೆ ಎನ್ನುವ ದೂರು, ದೆಹಲಿ ಬಿಜೆಪಿ ನಾಯಕರನ್ನು ಎಚ್ಚರಿಸಿದೆ.
ರಾಜ್ಯದ ಬಿಜೆಪಿ ನಾಯಕರು ಅಲರ್ಟ್ ಆಗಿದ್ದಾರೆ
ಬಿಜೆಪಿ ವರಿಷ್ಠರಿಂದ ಎಚ್ಚರಿಕೆ ಬಂದಿದ್ದೇ ತಡ, ರಾಜ್ಯದ ಬಿಜೆಪಿ ನಾಯಕರು ಅಲರ್ಟ್ ಆಗಿದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ಸುಮ್ಮನೆ ಕುಳಿತಿದ್ದ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರ ವಿರುದ್ದ ಈಗ ಮುಗಿಬೀಳುತ್ತಿದ್ದಾರೆ. ಈಗಾಗಲೇ, ಪ್ರತಾಪ್ ಸಿಂಹ, ಹಾಲಪ್ಪ ಆಚಾರ್, ಸಿ.ಸಿ.ಪಾಟೀಲ್ ಮುಂತಾದವರು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ. ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ದ ಹರಿಹಾಯುವುದು ಸ್ಪಷ್ಟ. "ಸರಕಾರದ ಸಾಧನೆಯಿಂದ ಹತಾಶರಾಗಿ ಕಾಂಗ್ರೆಸ್ಸಿನವರು ಬಿಟ್ ಕಾಯಿನ್ ವಿಚಾರವನ್ನು ಎಳೆದು ತರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬೊಮ್ಮಾಯಿಯವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಿದ್ದೇವೆ" ಎಂದು ಸಿ.ಸಿ.ಪಾಟೀಲ್ ಹೇಳಿದ್ದಾರೆ.