ದೆಹಲಿಯಲ್ಲಿ ಮತ್ತೊಂದು 'ಹಿಟ್ ಅಂಡ್ ರನ್' ಪ್ರಕರಣ : ಕಾರು ಡಿಕ್ಕಿಯಾಗಿ PhD ವಿದ್ಯಾರ್ಥಿ ಸಾವು, ಮತ್ತೊರ್ವನಿಗೆ ಗಾಯ

ನವದೆಹಲಿ : ಕೆಲ ದಿನಗಳಿಂದ ಹಿಟ್ ಅಂಡ್ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ. ದೆಹಲಿ ಅಂತಹದ್ದೆ ಘಟನೆಯೊಂದು ವರದಿಯಾಗಿದೆ.ಮಂಗಳವಾರ ತಡರಾತ್ರಿ ದೆಹಲಿಯ ಐಐಟಿ ಬಳಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ 30 ವರ್ಷದ ಸಂಶೋಧನಾ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾರೆ ಘಟನೆ ನಡೆದಿದೆ.
ವಿದ್ಯಾರ್ಥಿಗಳನ್ನು ಅಶ್ರಫ್ ನವಾಜ್ ಖಾನ್ (30) ಮತ್ತು ಅಂಕುರ್ ಶುಕ್ಲಾ (29) ಎಂದು ಗುರುತಿಸಲಾಗಿದೆ. ಇವರು ಐಐಟಿ ದೆಹಲಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿಗಳಾಗಿದ್ದಾರೆ.
ವಿದ್ಯಾರ್ಥಿಗಳಿಬ್ಬರು ಎಸ್‌ಡಿಎ ಮಾರುಕಟ್ಟೆಯ ರೆಸ್ಟೋರೆಂಟ್‌ನಲ್ಲಿ ರಾತ್ರಿ ಊಟ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ರಾತ್ರಿ 11:15 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಗೇಟ್ ನಂಬರ್ 1ರ ಬಳಿ ರಸ್ತೆ ದಾಟುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು.
ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರಿಗೂ ಗಾಯಗಳಾಗಿದ್ದವು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಖಾನ್ ಸಾವನ್ನಪ್ಪಿದ್ದು, ಕಾಲು ಮುರಿತಕ್ಕೊಳಗಾದ ಶುಕ್ಲಾ ಅವರನ್ನು ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾರು ಚಾಲಕನನ್ನು ಗುರುತಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.