ಹಾಲಿನ ಬೆಲೆ ಏರಿಕೆ ಬಳಿಕ ಮತ್ತೊಂದು ಶಾಕ್.! 'ಈರುಳ್ಳಿ' ಸೇರಿದಂತೆ ಹಲವು ತರಕಾರಿಗಳ ಬೆಲೆ ಏರಿಕೆ

ಹಾಲಿನ ಬೆಲೆ ಏರಿಕೆ ಬಳಿಕ ಮತ್ತೊಂದು ಶಾಕ್.! 'ಈರುಳ್ಳಿ' ಸೇರಿದಂತೆ ಹಲವು ತರಕಾರಿಗಳ ಬೆಲೆ ಏರಿಕೆ

ದಿನಬಳಕೆ ವಸ್ತುಗಳ ಬೆಲೆ ಈಗಾಗಲೇ ಗಗನ ಮುಟ್ಟಿದ್ದು, ಕೆಲ ದಿನಗಳ ಹಿಂದಷ್ಟೇ ಹಾಲಿನ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಅಡುಗೆಗೆ ಬೇಕಾದ ಈರುಳ್ಳಿ ಸೇರಿದಂತೆ ಹಲವು ತರಕಾರಿಗಳ ಬೆಲೆ ಏಕಾಏಕಿ ಏರಿಕೆಯಾಗತೊಡಗಿದ್ದು, ಗೃಹಿಣಿಯರ ಕಣ್ಣಲ್ಲಿ ನೀರು ತರಿಸುತ್ತಿದೆ.

ಈ ಹಿಂದೆ 20 ರಿಂದ 25 ರೂಪಾಯಿ ಆಸುಪಾಸಿನಲ್ಲಿದ್ದ ಈರುಳ್ಳಿ ಬೆಲೆ ಈಗ ಕೆಜಿಗೆ 35 ರೂಪಾಯಿ ತಲುಪಿದೆ. ಕೇವಲ ಒಂದೇ ವಾರಕ್ಕೆ 10 ರೂಪಾಯಿ ಏರಿಕೆಯಾದಂತಾಗಿದೆ. ಕೋಸು, ಟೊಮ್ಯಾಟೋ ಸೇರಿದಂತೆ ಇತರೆ ತರಕಾರಿಗಳ ಬೆಲೆಯಲ್ಲೂ ಏರಿಕೆ ಕಂಡಿದೆ.

ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದವರನ್ನು ಕಂಗೆಡಿಸಿದೆ. ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅಕಾಲಿಕ ಮಳೆಯಾಗುತ್ತಿರುವ ಕಾರಣ ಬೆಳೆ ನಷ್ಟವಾಗಿದ್ದು, ಈ ಕಾರಣಕ್ಕಾಗಿಯೇ ಈರುಳ್ಳಿ ಸೇರಿದಂತೆ ಎಲ್ಲ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ನವೆಂಬರ್ ವೇಳೆಗೆ ಮಾರುಕಟ್ಟೆಗೆ ಹೊಸ ಈರುಳ್ಳಿ ಬರಲಿದ್ದು, ಅಲ್ಲಿಯವರೆಗೂ ಇದೇ ರೀತಿ ಬೆಲೆ ಏರಿಕೆ ಇರಲಿದೆ ಎಂದು ಹೇಳಲಾಗುತ್ತಿದೆ. ಹೋಟೆಲ್ ಮಾಲೀಕರಿಗೆ ತರಕಾರಿಗಳ ಬೆಲೆ ಏರಿಕೆ ಆಗಿರುವುದು ಬಿಸಿ ತುಪ್ಪದಂತೆ ಪರಿಣಮಿಸಿದ್ದು, ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಮಾಡುವ ಚಿಂತನೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.