ಕಾಂಗ್ರೆಸ್‌ ಟಿಕೆಟ್‌: ಪ್ರಬಲ ಕೋಮು ಮೇಲುಗೈ; ಮಹಿಳೆಯರ ಸಂಖ್ಯೆ ಕಡಿಮೆ

ಕಾಂಗ್ರೆಸ್‌ ಟಿಕೆಟ್‌: ಪ್ರಬಲ ಕೋಮು ಮೇಲುಗೈ; ಮಹಿಳೆಯರ ಸಂಖ್ಯೆ ಕಡಿಮೆ

ಬೆಂಗಳೂರು: ರಾಜ್ಯ ವಿಧಾನಸಭೆಗೆ ಕಾಂಗ್ರೆಸ್‌ ಪ್ರಕಟಿಸಿರುವ 124 ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಬಲ ಕೋಮುಗಳು ಮೇಲುಗೈ ಸಾಧಿಸಿವೆ.

ಲಿಂಗಾಯತರಿಗೆ 32, ಒಕ್ಕಲಿಗರಿಗೆ 27 ಟಿಕೆಟ್‌ ನೀಡಲಾಗಿದ್ದು, ಎಸ್‌ಸಿ-21, ಎಸ್‌ಟಿ-10, ಒಬಿಸಿ ಸಮುದಾಯಕ್ಕೆ 20 ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಲಾಗಿದೆ.

ಮುಸ್ಲಿಂ ಸಮುದಾಯಕ್ಕೆ 9, ಕ್ರಿಶ್ಚಿಯನ್‌ ಸಮುದಾಯಕ್ಕೆ 1 ಕ್ಷೇತ್ರದಲ್ಲಿ ಟಿಕೆಟ್‌ ದೊರೆತಿದ್ದು, ಹಿಂದುಳಿದ ವರ್ಗಗಳಲ್ಲಿ ಕುರುಬ, ಈಡಿಗ, ಕುಂಬಾರ, ಮರಾಠ, ರಜಪೂತ್‌, ಬೆಸ್ತ , ಉಪ್ಪಾರ, ಆರ್ಯ ವೈಶ್ಯ, ಸಮುದಾಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಕ್ಕಲಿಗ ಸಮುದಾಯದ ಕೋಟಾದಡಿ ನಾಲ್ವರು ರೆಡ್ಡಿ ಹಾಗೂ ಓರ್ವ ಬಂಟ್ಸ್‌ ಸಮುದಾಯಕ್ಕೆ ಟಿಕೆಟ್‌ ನೀಡಲಾಗಿದೆ.

ಕಾಂಗ್ರೆಸ್‌ ಪಕ್ಷ ಪ್ರತಿಪಾದಿಸುವ ಸಾಮಾಜಿಕ ನ್ಯಾಯದ ಕೋಟಾದಡಿ ಅತ್ಯಂತ ಹಿಂದುಳಿದ ವರ್ಗಗಳು, ಮುಸ್ಲಿಂ ಸಮುದಾಯಕ್ಕೂ ಸಾಕಷ್ಟು ಪ್ರಾತಿನಿಧ್ಯ ನೀಡಲಾಗಿದೆ. ಆದರೆ ಮಹಿಳೆಯರ ಸಂಖ್ಯೆ ಕಡಿಮೆ ಇದೆ.

ಯಾರಿಗೆ, ಎಷ್ಟು?
*ಲಿಂಗಾಯತ-32
*ಒಕ್ಕಲಿಗ-27 (ರೆಡ್ಡಿ-4, ಬಂಟ್ಸ್‌-3 ಸೇರಿ)
* ಎಸ್‌ಸಿ ಬಲಗೈ-11
*ಎಸ್‌ಸಿ ಎಡಗೈ-4
*ಎಸ್‌ಸಿ ಲಂಬಾಣಿ-4
*ಎಸ್‌ಇ ಬೋವಿ-2
*ಎಸ್‌ಟಿ-10
*ಮುಸ್ಲಿಂ-9
* ಈಡಿಗ-5
*ಕುರುಬ-5
*ಬ್ರಾಹ್ಮಣ-5
*ಮರಾಠ-2
*ಕ್ರಿಶ್ಚಿಯನ್‌-1
*ಬೆಸ್ತ-1
*ರಜಪೂತ-1
*ಕುಂಬಾರ-1
*ಕೊಡವ-1
*ವೈಶ್ಯ-1
*ಜೈನ-1
*ಉಪ್ಪಾರ-1

ಟಿಕೆಟ್‌ ಆಕಾಂಕ್ಷಿಗಳ ಅಸಮಾಧಾನ
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ಅಸಮಾಧಾನ ಭುಗಿಲೆದ್ದಿದೆ.

ರಾಮದುರ್ಗ, ದೇವನಹಳ್ಳಿ, ರಾಜಾಜಿನಗರ, ಸಾಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು ಆಕ್ರೋಶ ಹೊರಹಾಕಿದ್ದು, ಅಧಿಕೃತ ಅಭ್ಯರ್ಥಿಗಳಿಗೆ ತಲೆನೋವು ಉಂಟಾಗಿದೆ.

ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ದೇವನಹಳ್ಳಿ ಟಿಕೆಟ್‌ ಕೊಟ್ಟಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಅಲ್ಲಿ ಕಾಂಗ್ರೆಸ್‌ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿ ಆಕ್ರೋಶ ಹೊರಹಾಕಿದ್ದಾರೆ.

ದೇವನಹಳ್ಳಿ ಕ್ಷೇತ್ರಕ್ಕೆ ಮಾಜಿ ಶಾಸಕ ವೆಂಕಟಸ್ವಾಮಿ ಸೇರಿ ಹದಿನಾಲ್ಕು ಮಂದಿ ಆಕಾಂಕ್ಷಿಗಳಿದ್ದು ಕೆ.ಎಚ್‌.ಮುನಿಯಪ್ಪ ಅವರು ಅರ್ಜಿ ಹಾಕಿರಲಿಲ್ಲ. ಜತೆಗೆ, ಅಲ್ಲಿ ಮೂರು ವರ್ಷಗಳ ಹಿಂದೆಯೇ ಹೋಗಿ ಎ.ಸಿ.ಶ್ರೀನಿವಾಸ್‌ ಕೆಲಸ ಮಾಡಿದ್ದರು. ಎಲ್ಲರನ್ನೂ ಬಿಟ್ಟು ಕೊನೇ ಹಂತದಲ್ಲಿ ಕೆ.ಎಚ್‌.ಮುನಿಯಪ್ಪ ಅವರಿಗೆ ಟಿಕೆಟ್‌ ಕೊಟ್ಟಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಇದೇ ರೀತಿ ರಾಜಾಜಿನಗರದಲ್ಲಿ ಮಾಜಿ ಉಪ ಮೇಯರ್‌ ಪುಟ್ಟರಾಜು, ಭವ್ಯ ನರಸಿಂಹಮೂರ್ತಿ ಸೇರಿ ಹಲವು ಆಕಾಂಕ್ಷಿಗಳಿದ್ದರು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಇತ್ತೀಚೆಗಷ್ಟೇ ಬಂದಿದ್ದ ಪುಟ್ಟಣ್ಣ ಅವರಿಗೆ ಟಿಕೆಟ್‌ ಘೋಷಿಸಿರುವುದು ಇತರೆ ಆಕಾಂಕ್ಷಿಗಳಿಗೆ ಬೇಸರ ತರಿಸಿದೆ.

ಟಿಕೆಟ್‌ ಆಕಾಂಕ್ಷಿಗಳೆಲ್ಲಾ ಸೇರಿ ನಮ್ಮಲ್ಲಿ ಒಬ್ಬರಿಗೆ ಕೊಡಿ ಎಂದು ಆಗ್ರಹಿಸಿದ್ದರು. ಆದರೆ, ಹೈಕಮಾಂಡ್‌ ಪುಟ್ಟಣ್ಣಗೆ ಮಣೆ ಹಾಕಿದೆ. ಇಲ್ಲಿ ಆಕಾಂಕ್ಷಿಗಳು ಆಕ್ರೋಶಗೊಂಡಿದ್ದು ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ.

ಮತ್ತೊಂದೆಡೆ ರಾಮದುರ್ಗದಲ್ಲಿ ಅಶೋಕ್‌ ಪಟ್ಟಣ್‌ ಅವರಿಗೆ ಟಿಕೆಟ್‌ ನೀಡಿರುವುದರಿಂದ ಆಕಾಂಕ್ಷಿ ಚಿಕ್ಕರೇವಣ್ಣ ಬಂಡಾಯವಾಗಿ ಸ್ಪ³ರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಮತ್ತೂಬ್ಬ ಆಕಾಂಕ್ಷಿ ರಾಜೇಂದ್ರಪಾಟೀಲ್‌ ಅಸಮಾಧಾನಗೊಂಡಿದ್ದಾರೆ.

ಪಾವಗಡದಲ್ಲಿ ಶಾಸಕ ವೆಂಕಟರಮಣಪ್ಪ ಪುತ್ರನಿಗೆ ಟಿಕೆಟ್‌ ನೀಡಬಾರದು ಎಂದು ಆಗ್ರಹ ಇದ್ದರೂ ಅವರಿಗೇ ಟಿಕೆಟ್‌ ಕೊಟ್ಟಿರುವುದು ಉಳಿದವರ ಆಕ್ರೋಶಕ್ಕೆ ಕಾರಣವಾಗಿದೆ.

ಸಾಗರದಲ್ಲಿ ತಮ್ಮ ಪುತ್ರಿಗೆ ಟಿಕೆಟ್‌ ಬಯಸಿದ್ದ ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರು ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ