ಪ್ರತಿಭಟನೆ ನಡುವೆಯೇ ರೈಲಿಗೆ ತಲೆಕೊಟ್ಟು ಪ್ರಾಣ ಬಿಟ್ಟ ಅನುದಾನಿತ ಶಾಲಾ ಶಿಕ್ಷಕ

ಪ್ರತಿಭಟನೆ ನಡುವೆಯೇ ರೈಲಿಗೆ ತಲೆಕೊಟ್ಟು ಪ್ರಾಣ ಬಿಟ್ಟ ಅನುದಾನಿತ ಶಾಲಾ ಶಿಕ್ಷಕ

ಬಾಗಲಕೋಟೆ: ಅನುದಾನಿತ ಶಾಲಾ ಶಿಕ್ಷಕರ ಪಿಂಚಣಿಗಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಅನಿರ್ಧಿಷ್ಟವಧಿ ಪ್ರತಿಭಟನೆಗೆ ರಾಯಚೂರುನಿಂದ ಬಂದಿದ್ದ ಶಿಕ್ಷಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಂಕರಪ್ಪ ಬೋರಡ್ಡಿ (47) ಮೃತ ದುರ್ದೈವಿ. ಬೋರಡ್ಡಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ನಿವಾಸಿ.

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಅನುದಾನಿತ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದರು. ಅನುದಾನಿತ ಶಾಲಾ ಶಿಕ್ಷಕರಿಂದ ಪಿಂಚಣಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ರಾಯಚೂರಿನಿಂದ ಬೆಂಗಳೂರಿಗೆ ಬಂದಿದ್ದರು.

ಮಂಗಳವಾರ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಅನಿರ್ದಿಷ್ಟವಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆ ಮುಗಿದ ಬಳಿಕ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಬಳಿ ಬಂದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಶಿಕ್ಷಕನ ಕುಟುಂಬದವರು ಬರುವ ಮುನ್ನವೆ ಪೊಲೀಸರೇ ಮರುಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಆಂಬುಲೆನ್ಸ್​​ನಲ್ಲಿ ಮೃತದೇಹವನ್ನು ಕಳುಹಿಸಲು ಎಲ್ಲ ಸಿದ್ದತೆಯನ್ನು ಮಾಡಿಕೊಂಡಿದ್ದರು. ಈ ಕುರಿತಾಗಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತ ಶಿಕ್ಷಕನ ಕುಟುಂಬಸ್ಥರು ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಆಂಬ್ಯುಲೆನ್ಸ್​​ನಲ್ಲಿ ಮೃತ ದೇಹವನ್ನು ತೆಗೆದುಕೊಂಡು ಬಂದಿದ್ದರು. ಆಂಬ್ಯುಲೆನ್ಸ್​​ನ್ನು ಗೇಟ್​​ನಲ್ಲಿಯೇ ಪೊಲೀಸರು ತಡೆ ಹಿಡಿದಿದ್ದಕ್ಕೆ ಪೊಲೀಸರೊಂದಿಗೆ ಕುಟುಂಬಸ್ಥರ ವಾಗ್ವಾದ ನಡೆದಿದೆ.

'ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕನ ಕುಟುಂಬಕ್ಕೆ ನೌಕರಿ, ಸೂಕ್ತ ಪರಿಹಾರ ಕೊಡಬೇಕೆಂದು' ಸರ್ಕಾರದ ವಿರುದ್ದ ಮಾಜಿ ಸಚಿವ ಎಸ್ ಆರ್ ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.