ಮತ್ತೆ ಟೋಲ್ ಶುಲ್ಕ ಹೆಚ್ಚಳ, ಏಪ್ರಿಲ್ 1ರಿಂದಲೇ ಹೊಸ ದರ ಜಾರಿ: ಮಾಹಿತಿ ಇಲ್ಲಿದೆ

ಮೈಸೂರು, ಮಾರ್ಚ್, 31: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಆರಂಭ ಆದಾಗಿನಿಂದ ಟೋಲ್ ವಿಚಾರವಾಗಿ ವಾಹನ ಸವಾರರು ಹಾಗೂ ಟೋಲ್ ಸಿಬ್ಬಂದಿ ನಡುವೆ ವಾರ್‌ಗಳು ಆಗುತ್ತಲೇ ಇವೆ. ಇದೀಗ ಮತ್ತೆ ಟೋಲ್ ಸಂಗ್ರಹ ಆರಂಭವಾಗಿ 17 ದಿನದಲ್ಲೇ ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಟೋಲ್ ಮೊತ್ತ ಹೆಚ್ಚಿಸಲು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ. ಈ ಹೊಸ ಟೋಲ್ ದರವು ಶನಿವಾರ (ಏಪ್ರಿಲ್ 1)ದಿಂದ ಜಾರಿ ಆಗಲಿದೆ. ಟೋಲ್ ದರದಲ್ಲಿ ಶೇ.22ರಷ್ಟು ಹೆಚ್ಚಳ ಮಾಡುತ್ತಿದ್ದು, ಇದು ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹೊಸ ಟೋಲ್ ದರದ ವಿವರ ಇಲ್ಲಿದೆ
1. ಕಾರು, ವ್ಯಾನ್, ಜೀಪ್: 165 ರೂಪಾಯಿ, ದ್ವಿಮುಖ ಸಂಚಾರ 250 ರೂಪಾಯಿ ಮತ್ತು ಒಂದು ಬಾರಿ 30 ರೂಪಾಯಿ, ಮತ್ತೊಂದು ಬಾರಿ 45 ರೂಪಾಯಿ ಹೆಚ್ಚಳ ಮಾಡಲಾಗಿದೆ.
2. ಟ್ರಕ್, ಬಸ್, ಟ್ಯಾಕ್ಸಿ: 565 ರೂಪಾಯಿ, ದ್ವಿಮುಖ ಸಂಚಾರಕ್ಕೆ 850 ರೂಪಾಯಿ. ಹಾಗೆಯೇ ಒಂದು ಬಾರಿ 165 ರೂಪಾಯಿ, ಮತ್ತೊಂದು ಬಾರಿ 160 ರೂಪಾಯಿ ಹೆಚ್ಚಳ ಮಾಡಲಾಗಿದೆ.
3. ಲಘು ವಾಹನಗಳು, ಮಿನಿ ಬಸ್: 270 ರೂಪಾಯಿ, ದ್ವಿಮುಖ ಸಂಚಾರಕ್ಕೆ 405 ರೂಪಾಯಿ ಆಗಿದೆ. ಅಲ್ಲದೇ ಒಂದು ಬಾರಿ 50 ರೂಪಾಯಿ ಎರಡನೇ ಬಾರಿ 75 ರೂಪಾಯಿ ಹೆಚ್ಚಳ ಮಾಡಲಾಗಿದೆ.
4. ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: 615 ರೂಪಾಯಿ, ದ್ವಿಮುಖ ಸಂಚಾರಕ್ಕೆ 925 ರೂಪಾಯಿ ಆಗಿದೆ. ಮೊದಲ ಬಾರಿ 115 ರೂಪಾಯಿ ಹೆಚ್ಚಳ ಮಾಡಿದ್ದು, ಎರಡನೇ ಬಾರಿ 225 ರೂಪಾಯಿ ಹೆಚ್ಚಳ ಮಾಡಲಾಗಿದೆ.
5. ಭಾರಿ ವಾಹನಗಳು: 885 ರೂಪಾಯಿ, ದ್ವಿಮುಖ ಸಂಚಾರಕ್ಕೆ 1,330 ರೂಪಾಯಿ ಆಗಿದೆ. ಹಾಗೆಯೇ ಮೊದಲ ಬಾರಿ 165 ರೂಪಾಯಿ ಎರಡನೇ ಬಾರಿ 250 ರೂಪಾಯಿ ಹೆಚ್ಚಳ ಮಾಡಲಾಗಿದೆ.
6. ಇನ್ನು 7 ಅಥವಾ ಎಕ್ಸೆಲ್ ವಾಹನಗಳಿಗೆ 1,080 ರೂಪಾಯಿ, ದ್ವಿಮುಖ ಸಂಚಾರಕ್ಕೆ 1,620 ರೂಪಾಯಿ ಆಗಿದೆ. ಮೊದಲ ಬಾರಿ 200 ರೂಪಾಯಿ ಎರಡನೇ ಬಾರಿ 305 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಮೊದಲೇ ಟೋಲ್ ಆರಂಭವಾದಾಗಿನಿಂದ ವಾಹನ ಸವಾರರು ಟೋಲ್ ಸಿಬ್ಬಂದಿಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಇದೀಗ ಮತ್ತೆ ಟೋಲ್ ಶುಲ್ಕವನ್ನು ಹೆಚ್ಚಿಸಿರುವುದರಿಂದ ವಾಹನ ಸವಾರರು ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆಯೋ ಎಂದು ಕಾದುನೋಡಬೇಕಿದೆ.
ಕಾರು ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ
ಇದೇ ರೀತಿ ಮಾರ್ಚ್ 29ರ ತಡರಾತ್ರಿ ಕಣಮಿಣಕಿ ಟೋಲ್‌ನ ಪಾಸ್ಟ್ಯಾಗ್ ಸ್ಕ್ಯಾನರ್ ಹಾಳಾಗಿದ್ದು, ಇದರಿಂದ ಬೇಸತ್ತ ಕಾರಿನ ಚಾಲಕರೊಬ್ಬರು ಬೇರೆ ದಾರಿಯಿಲ್ಲದೆ ಅಲ್ಲಿಂದ ತೆರಳಲು ಮುಂದಾಗಿದ್ದಾರೆ. ಆಗ ಟೋಲ್ ಸಿಬ್ಬಂದಿ ತಮ್ಮದೇ ತಪ್ಪಿದ್ದರೂ ಕೂಡ ಕಾರಿನ ಚಾಲಕನಿಗೆ ಥಳಿಸಿರುವ ಘಟನೆ ನಡೆದಿತ್ತು.
ಇತ್ತೀಚೆಗಷ್ಟೇ ಟೋಲ್‌ನಲ್ಲಿ ಸ್ಕ್ಯಾನರ್ ವರ್ಕ್ ಆಗದೇ ವಾಹನ ಸವಾರರು ಪರದಾಡುವಂತೆ ಆಗಿತ್ತು. ಅಲ್ಲದೆ ಕೆಲವು ವಾಹಗಳು ಕೂಡ ಡ್ಯಾಮೇಜ್ ಆಗಿದ್ದವು. ಇದರಿಂದ ರೊಚ್ಚಿಗೆದ್ದಿದ್ದ ವಾಹನ ಸವಾರರು ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಕಣಮಿಣಕಿ ಬಳಿ ಕಾರಿನ ಚಾಲಕ ಹಾಗೂ ಟೋಲ್ ಪ್ಲಾಜಾ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ಕಾರಿನ ಚಾಲಕನಿಗೆ ಟೋಲ್ ಸಿಬ್ಬಂದಿ ಥಳಿಸಿ ಗೂಂಡಾ ವರ್ತನೆ ಮೆರೆದಿದ್ದಾರೆ.
ಬೆಂಗಳೂರಿನ ತಣಿಸಂದ್ರ ನಿವಾಸಿ ವಿಶ್ವನಾಥ್ ಎಂಬುವವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ವಿಶ್ವನಾಥ್ ಕಾರಿನಲ್ಲಿ ಬಂದ ವೇಳೆ ಟೋಲ್ ಪ್ಲಾಜಾದಲ್ಲಿ ಅಲ್ಲಿನ ಫಾಸ್ಟ್ ಟ್ಯಾಗ್ ರೀಡ್ ಆಗಿರಲಿಲ್ಲ. ಆಗ ವಾಹನ ಚಾಲಕ ಹಾಗೂ ಟೋಲ್ ಪ್ಲಾಜಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಾರು ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದೆ.