ನಾಳೆ ಮಹತ್ವದ ಬಿಜೆಪಿ ಕೋರ್ ಕಮಿಟಿ ಸಭೆ

ನಾಳೆ ಮಹತ್ವದ ಬಿಜೆಪಿ ಕೋರ್ ಕಮಿಟಿ ಸಭೆ

ಬೆಂಗಳೂರು,ನ.8- ಮುಂಬರುವ ಬಿಬಿಎಂಪಿ, ವಿಧಾನಪರಿಷತ್, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ನಾಳೆ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ನಗರಕ್ಕೆ ಆಗಮಿಸಲಿದ್ದು, ನಾಳೆ ಮತ್ತು ಬುಧವಾರ ಎರಡು ದಿನಗಳ ಕಾಲ ದಿನಪೂರ್ತಿ ಪಕ್ಷದ ಸಂಘಟನೆ ಹಾಗೂ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸುವರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೋರ್ ಕಮಿಟಿ ಸದಸ್ಯರಾದ ಆರ್.ಅಶೋಕ್, ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ.

ಎರಡು ದಿನಗಳ ಈ ಸಭೆಯಲ್ಲಿ ಮುಖ್ಯವಾಗಿ ಇತ್ತೀಚೆಗೆ ಪ್ರಕಟಗೊಂಡ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ನಡೆಯಲಿದೆ. ಅದರಲ್ಲೂ ಹಾನಗಲ್‍ನಲ್ಲಿ ಬಿಜೆಪಿ ಸೋತಿರುವುದು ಪಕ್ಷಕ್ಕೆ ಭಾರೀ ಮುಜುಗರವನ್ನು ತಂದಿದೆ. ಮುಂಬರುವ ಚುನಾವಣೆ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ತಂತ್ರಗಳ ಬಗ್ಗೆ ಪ್ರಮುಖರು ಚರ್ಚೆ ಮಾಡುವರು.

ನಾಳೆ ಇಡೀ ದಿನ ಭರ್ಜರಿ ರಾಜಕೀಯ ವಿದ್ಯಮಾನಗಳು ಜರುಗಲಿವೆ. ಸಿಎಂ ತವರು ಜಿಲ್ಲೆ ಹಾನಗಲ್ ಸೋಲಿನ ಆತ್ಮಾವಲೋಕನ ಸಭೆ, ಸಂಘಟನೆ ಚುರುಕಿಗೆ ಪದಾಧಿಕಾರಿಗಳ ಸಭೆ ಹಾಗು ಬಿಬಿಎಂಪಿ ಚುನಾವಣೆ ತಯಾರಿ ಜತೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕೂಡ ನಡೆಯಲಿದೆ.

ಈಗಾಗಲೇ ಹಾನಗಲ್ ಸೋಲಿನ ಕುರಿತು ಹೈಕಮಾಂಡ್ ರಾಜ್ಯ ಘಟಕದಿಂದ ವರದಿ ನೀಡಿದ್ದು, ನಾಳಿನ ಸಭೆಯಲ್ಲಿ ಎಲ್ಲಿ ಎಡವಲಾಯಿತು, ಲೋಪಗಳೇನು, ಭವಿಷ್ಯದಲ್ಲಿ ಕ್ಷೇತ್ರ ಮರಳಿ ಪಡೆಯಲು ಮಾಡಬೇಕಿರುವ ತಂತ್ರಗಳ ಕುರಿತು ಸಮಾಲೋಚನೆ ನಡೆಸಿ, ವಿಸ್ತತವಾದ ವರದಿಯನ್ನು ಅರುಣ್ ಸಿಂಗ್ ಅವರಮೂಲಕ ಹೈಕಮಾಂಡ್‍ಗೆ ತಲುಪಿಸಲಾಗುತ್ತದೆ.

ನಂತರ ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಭವಿಷ್ಯದ ಚುನಾವಣೆಗಳಿಗೆ ಸಿದ್ಧತೆ ಆರಂಭ, ಸಂಘಟನೆ ಚುರುಕುಗೊಳಿಸುವ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗುತ್ತದೆ. ಅತಿದೊಡ್ಡ ರಾಜಕೀಯ ಪಕ್ಷವಾದರೂ ಇತ್ತೀಚಿನ ಉಪ ಸಮರದ ಫಲಿತಾಂಶ ಹೈಕಮಾಂಡ್‍ಗೆ ಬೇಸರ ತರಿಸಿದ್ದು, ಮತ್ತೆ ಸಂಘಟನೆ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವ ಕುರಿತು ಚರ್ಚಿಸಲಾಗುತ್ತದೆ.

ಬಿಬಿಎಂಪಿ ಗದ್ದುಗೆ ಪಡೆಯಲು ಸರ್ಕಸ್: ಸದ್ಯದಲ್ಲಿಯೇ ಬಿಬಿಎಂಪಿ ಚುನಾವಣೆ ಎದುರಾಗಲಿದ್ದು, ಈ ಚುನಾವಣೆ ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ. ಕಳೆದ ಬಾರಿ ಅತಿದೊಡ್ಡ ಪಕ್ಷವಾದರೂ ಅಕಾರ ಹಿಡಿಯಲು ವಿಫಲವಾಗಿ ಕಡೆಯ ಅವಯ ಒಂದು ವರ್ಷಕ್ಕೆ ತೃಪ್ತಿಪಟ್ಟುಕೊಂಡಿತ್ತು. ಹಾಗಾಗಿ ಈ ಬಾರಿ ಶತಾಯ ಗತಾಯ ಬಿಬಿಎಂಪಿ ಗದ್ದುಗೆ ಪಡೆಯಲು ಕಸರತ್ತು ನಡೆಸುತ್ತಿದ್ದು, ಪಾಲಿಕೆ ಚುನಾವಣಾ ಸಿದ್ದತೆ ಕುರಿತು ಸಭೆ ನಡೆಸಲಾಗುತ್ತದೆ.

ಸರಣಿ ಸಭೆಗಳ ನಂತರ ಸಂಜೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಬಳಿಕ ಬೆಳಗ್ಗೆಯಿಂದ ನಡೆದ ಸಭೆಗಳ ನಿರ್ಣಯ ಅವಲೋಕನ ಮಾಡಲಿದ್ದು, ಪರಿಷತ್ ಚುನಾವಣೆ ಸೇರಿ ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಲಾಗುತ್ತದೆ ಎನ್ನಲಾಗುತ್ತಿದೆ.

ಸಭೆಗಳಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 6.25 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಕೆ.ಕೆ.ಗೆಸ್ಟ್ ಹೌಸ್‍ನಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ಬಿಬಿಎಂಪಿಯಲ್ಲಿ ಪಕ್ಷದ ಪ್ರಸಕ್ತ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಲಿದ್ದಾರೆ.ಸಿಂಧಗಿ ಹಾನಗಲ್ ಉಪಚುನಾವಣೆಯ ಅವಲೋಕನ ಮಾಡಲಿರುವ ಅರುಣ್ ಸಿಂಗ್ ಹಾನಗಲ್ ಸೋಲಿನ ಕಾರಣವನ್ನೂ ಸಮಗ್ರವಾಗಿ ಚರ್ಚಿಸಲಿದ್ದಾರೆ.

ವಿಧಾನ ಪರಿಷತ್ ಟಿಕೆಟ್ ಚರ್ಚೆ: ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾ ಗುವ 25 ಸ್ಥಾನಗಳಿಗೆ ಜನವರಿಯಲ್ಲಿ ಚುನಾವಣೆ ನಡೆಯಲಿದ್ದು, ಇದರ ಅಭ್ಯರ್ಥಿಗಳ ಆಯ್ಕೆ, ಜಿಲ್ಲಾ ಮತ್ತು ತಾ. ಪಂ. ಚುನಾವಣೆಗಾಗಿ ಪಕ್ಷದ ಕಾರ್ಯತಂತ್ರ, ಸಂಘಟನೆಗಳ ರೂಪುರೇಷೆ ಹಾಗೂ ಜನ ಸ್ವರಾಜ್ ಯಾತ್ರೆಯನ್ನು ಪರಿಣಾಮಕಾರಿಯಾಗಿಸುವ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಗಳಿವೆ.

ಈ ಮಧ್ಯೆ ನ. 19ರಿಂದ ಆರಂಭ ಗೊಳ್ಳಲಿರುವ ಬಿಜೆಪಿಯ ಜನ ಸ್ವರಾಜ್ ಯಾತ್ರೆಯ ಪಟ್ಟಿಯಿಂದ ಕೊನೆಯ ಕ್ಷಣದಲ್ಲಿ ಕೇಂದ್ರ ಮಾಜಿ ಸಚಿವ ಡಿ.ವಿ. ಸದಾನಂದ ಗೌಡರಿಗೆ ಕೊಕ್ ಕೊಡಲಾಗಿದೆ.