ಸಿದ್ದರಾಮಯ್ಯ ಅವರಿಗೆ ಮತ್ತೆ ಕಾಗೆ ಕಂಟಕ?; ಈ ಬಾರಿ ಕಚೇರಿ ಬಳಿಗೇ ಬಂದು ಕುಳಿತ ಕಾಕ!

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಇದೀಗ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಮತ್ತೆ ಕಾಗೆ ಕಂಟಕ ಎದುರಾಗಿದೆಯೇ ಎಂಬ ಚರ್ಚೆ ಹಲವೆಡೆ ಶುರುವಾಗಿದೆ. ಅಂಥದ್ದೊಂದು ಚರ್ಚೆಗೆ ಈಗ ಕಾಗೆಯೊಂದು ಕಾರಣವಾಗಿದೆ.
ಐದು ವರ್ಷಗಳ ಹಿಂದೆ ಸರ್ಕಾರದ ವತಿಯಿಂದ ತಮಗೆಂದು ನೀಡಲಾಗಿದ್ದ ಕಾರಿನ ಮೇಲೆ ಕಾಗೆ ಕುಳಿತಿದ್ದರಿಂದ, ಮುಂದೆ ಅದರಿಂದ ಕಂಟಕ ಎದುರಾಗಬಹುದು ಎಂದು ಸಿದ್ದರಾಮಯ್ಯ ಅವರು ಆ ಕಾರನ್ನು ಬದಲಿಸಿ ಹೊಸ ಕಾರನ್ನು ಪಡೆದಿದ್ದರು.
ನಂತರ ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮರಣಾರ್ಥವಾಗಿ ನಡೆದ 'ಗಿಳಿವಿಂಡು' ಎಂಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಆ ದಿನ ಅಲ್ಲಿ ಅವರ ಎಡ ತೊಡೆ ಮೇಲೆ ಕಾಗೆ ಹಿಕ್ಕೆ ಹಾಕಿತ್ತು. ಅವರ ಬಲಬದಿಯಲ್ಲಿ ಅಂದು ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ, ಎಡಬದಿಯಲ್ಲಿ ಸಚಿವ ರಮಾನಾಥ ರೈ ಕೂತಿದ್ದರು. ಅದಾಗ್ಯೂ ಕಾಗೆ ಹಿಕ್ಕೆ ಸಿದ್ದರಾಮಯ್ಯ ಅವರ ಮೇಲೆ ಮಾತ್ರ ಬಿದ್ದಿದ್ದು, ಅದು ಶನಿಕಾಟ ಎಂದು ಅಂದು ಜ್ಯೋತಿಷಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದೀಗ ಸಿದ್ದರಾಮಯ್ಯ ಅವರಿಗೆ ಕಾಗೆ ಕಂಟಕದ ಮೂಲಕ ಮತ್ತೆ ಶನಿಕಾಟ ಆರಂಭವಾಗಿದೆಯೇ ಎಂಬ ಚರ್ಚೆ ರಾಜಕೀಯ ಆಸಕ್ತರ ವಲಯದಲ್ಲಿ ನಡೆಯುತ್ತಿದೆ. ಏಕೆಂದರೆ ಈಗ ವಿಧಾನಸಭೆಯ ವಿರೋಧಪಕ್ಷದ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ವಿಧಾನಸೌಧದಲ್ಲಿ ನೀಡಲಾಗಿರುವ ಕಚೇರಿ ಬಳಿಗೇ ಕಾಗೆಯೊಂದು ಬಂದು ಕುಳಿತಿದ್ದು ಕಂಡುಬಂದಿದೆ. ಅವರ ಕಚೇರಿಯ ಫಲಕದ ಮೇಲೆ ಕಾಗೆ ಕಾಣಿಸಿಕೊಂಡಿರುವ ಚಿತ್ರವೊಂದು ವಾಟ್ಸ್ಆಯಪ್ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಚರ್ಚೆಯನ್ನು ಹುಟ್ಟುಹಾಕಿದೆ.