'ದಯವಿಟ್ಟು ಬೆಂಗಳೂರಿನಲ್ಲಿ ಹೆಚ್ಚಿನ ಸಮಯ ಕಳೆಯಿರಿ'': ಸಂಸದ ತೇಜಸ್ವಿ ಸೂರ್ಯಗೆ ನೆಟ್ಟಿಗರ ತರಾಟೆ

'ದಯವಿಟ್ಟು ಬೆಂಗಳೂರಿನಲ್ಲಿ ಹೆಚ್ಚಿನ ಸಮಯ ಕಳೆಯಿರಿ'': ಸಂಸದ ತೇಜಸ್ವಿ ಸೂರ್ಯಗೆ ನೆಟ್ಟಿಗರ ತರಾಟೆ

ಬೆಂಗಳೂರು, ನ.12: ಇತ್ತೀಚೆಗೆ ಸಾಬರಮತಿ ನದಿಗೆ ನಿರ್ಮಿಸಲಾದ ಸೇತುವೆಗೆ ಭೇಟಿ ನೀಡಿದ್ದನ್ನು ತನ್ನ ಟ್ವೀಟರ್ ಖಾತೆಯಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು, 'ಬಿಜೆಪಿ ಸರ್ಕಾರಗಳ ಡಬಲ್‌ ಎಂಜಿನ್‌ನಿಂದಾಗಿ ಗುಜರಾತ್‌ ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗುತ್ತಿದೆ' ಎಂದು ಬರೆದುಕೊಂಡಿದ್ದರು.

ತೇಜಸ್ವಿ ಸೂರ್ಯ ಅವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಹಲವರು ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಗಳನ್ನು ಉಲ್ಲೇಖಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಖ್ಯಾತ ಉದ್ಯಮಿ ಟಿ.ವಿ.ಮೋಹನ್‌ದಾಸ್‌ ಪೈ ಅವರು, ''ತೇಜಸ್ವಿ ಸೂರ್ಯ ಅವರೇ... ದಯವಿಟ್ಟು ಬೆಂಗಳೂರಿನಲ್ಲಿ ಹೆಚ್ಚಿನ ಸಮಯ ಕಳೆಯಿರಿ. ನಮಗೆ ಉತ್ತಮ ರಸ್ತೆಗಳು ದೊರೆಯಲಿ. ಗುಂಡಿಗಳ ಮುಕ್ತ ರಸ್ತೆಗಳು ಬೇಕು. ಉತ್ತಮ ಸಂಚಾರ ವ್ಯವಸ್ಥೆ, ಕಸ ಇಲ್ಲದ ಸ್ವಚ್ಛ ರಸ್ತೆಗಳು ದೊರೆಯುವಂತಾಗಲಿ. ನೀವು ನಮ್ಮ ಸಂಸದರು. ನಿಮ್ಮ ಅಗತ್ಯತೆ ನಮಗೆ ಇಲ್ಲಿ ಬಹಳ ಇದೆ. ಇಲ್ಲಿಯೂ ಅದೇ ಡಬಲ್‌ ಎಂಜಿನ್‌ ಇದೆ. ಆದರೆ, ಅದು ಇಲ್ಲಿ ಕಾರ್ಯನಿರ್ವಹಿಸುತ್ತಿಲ್ಲ'' ಎಂದು ಕಿಡಿಕಾರಿದ್ದಾರೆ.

''ಬೆಂಗಳೂರಿನಿಂದ ಕೆಲವು ಸುಂದರವಾದ ಹೊಂಡಗಳ ರಸ್ತೆಗಳು, ಟ್ರಾಫಿಕ್ ಜಾಮ್ ಚಿತ್ರಗಳನ್ನು ಪೋಸ್ಟ್ ಮಾಡಿ'' ಎಂದು ನೆಟ್ಟಿಗರೊಬ್ಬರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

''ನಿಮಗೆ ಸಮಯವಿದ್ದರೆ ದಯವಿಟ್ಟು ಅತ್ಯಾಧುನಿಕ ಗುಂಡಿಗಳಿಗೆ ಹೆಸರುವಾಸಿಯಾದ ಬೆಂಗಳೂರು ದಕ್ಷಿಣಕ್ಕೂ ಭೇಟಿ ನೀಡಿ'' ಎಂದು ಶರತ್ ಎಂಬುವರು ಪ್ರತಿಕ್ರಿಯಸಿದ್ದಾರೆ.

ಇನ್ನು ಉದ್ಯಮಿ ಟಿ.ವಿ.ಮೋಹನ್‌ದಾಸ್‌ ಪೈ ಅವರ ಟ್ವೀಟ್ ಅನ್ನು ಉಲ್ಲೇಖಿಸಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ''ತನ್ನ ಕ್ಷೇತ್ರ ಮುಳುಗಿದ್ದಾಗ ದೋಸೆ ಸವಿಯುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಕರ್ನಾಟಕದ ಬದಲು ಗುಜರಾತಿನ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತಾಡುತ್ತಿದ್ದಾರೆ. ನರೇಂದ್ರ ಮೋದಿ ಅವರೇ, ನಿಮ್ಮ ಬೆಂಬಲಿಗ ಉದ್ಯಮಿಯೊಬ್ಬರು ನಿಮ್ಮ ಸಂಸದರ & #TroubleEngineSarkara ದ ಯೋಗ್ಯತೆ ತಿಳಿಸಿದ್ದಾರೆ. ನಿಮ್ಮವರ ಮಾತನ್ನೂ ನೀವು ಗಮನಿಸುವುದಿಲ್ಲವೇ?'' ಎಂದು ಪ್ರಶ್ನೆ ಮಾಡಿದೆ.