ವಿದ್ಯಾರ್ಥಿಗಳಿಗೆ ಜಾಮೀನು: ಕೋರ್ಟ್ ಆದೇಶ ಪ್ರಶ್ನಿಸಿ ಸಪ್ರೀಂಗೆ ಅರ್ಜಿ

ವಿದ್ಯಾರ್ಥಿಗಳಿಗೆ ಜಾಮೀನು: ಕೋರ್ಟ್ ಆದೇಶ ಪ್ರಶ್ನಿಸಿ ಸಪ್ರೀಂಗೆ ಅರ್ಜಿ

ನವದೆಹಲಿ (ಪಿಟಿಐ): ಈಶಾನ್ಯ ದೆಹಲಿಯಲ್ಲಿ ಕಳೆದ ವರ್ಷ ನಡೆದಿದ್ದ ಗಲಭೆ ಪ್ರಕರಣಗಳಲ್ಲಿ ಮೂವರು ವಿದ್ಯಾರ್ಥಿಗಳಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್‌ನ ಮೂರು ಪ್ರತ್ಯೇಕ ತೀರ್ಪುಗಳನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಜೆಎನ್‌ಯು ವಿದ್ಯಾರ್ಥಿಗಳಾದ ನತಾಶಾ ನರ್ವಾಲ್‌, ದೇವಾಂಗನಾ ಕಾಲಿತಾ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಆಸಿಫ್‌ ಇಕ್ಬಾಲ್‌ ತನ್ಹಾ ಅವರಿಗೆ ಹೈಕೋರ್ಟ್‌ ಮಂಗಳವಾರವಷ್ಟೇ ಜಾಮೀನು ಮಂಜೂರು ಮಾಡಿತ್ತು.

‌'ಭಯೋತ್ಪಾದಕ ಕಾನೂನುಗಳನ್ನು ವಿವೇಚನೆಯಿಲ್ಲದೆ ಬಳಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ಹೈಕೋರ್ಟ್‌, ಪ್ರತಿಭಟಿಸುವ ಹಕ್ಕು ಮತ್ತು ಭಯೋತ್ಪಾದನೆಯ ನಡುವಣ ರೇಖೆಯನ್ನು ಸರ್ಕಾರ ಮುಸುಕಾಗಿಸಿದೆ. ಈ ಮನಸ್ಥಿತಿಯೇ ಗಟ್ಟಿಗೊಂಡರೆ ಅದು ಪ್ರಜಾಪ್ರಭುತ್ವಕ್ಕೆ ವಿಷಾದದ ದಿನ ಎಂದು ಹೇಳದೆ ವಿಧಿಯಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.