ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಪ್ರಾಂಶುಪಾಲರಿಂದ ಫೈನ್ : ಮನನೊಂದು ಹೆಬ್ರಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಶರಣು
ಉಡುಪಿ: ಕ್ಷುಲಕ ಕಾರಣಕ್ಕೆ ಮನನೊಂದು ಹೆಬ್ರಿಯಲ್ಲಿರುವ ಎಸ್ ಆರ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ದುರಂತ ಘಟನೆ ಬೆಳಕಿಗೆ ಬಂದಿದೆ
ಶಿಕ್ಷಕರು ಬೈದ್ರು, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂಬೆಲ್ಲಾ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಂತೆ ಪ್ರಾಂಶುಪಾಲರು ಬೈದರು ಎಂಬ ಕಾರಣಕ್ಕೆ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಹೆಬ್ರಿ ಕಾಲೇಜಿನ ದೀಪ್ತಿ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ.ಈಕೆ ಉತ್ತಮವಾಗಿಯೇ ವಿದ್ಯಾಭ್ಯಾಸ ಮಾಡಿಕೊಂಡಿದ್ದಳು. ಹೀಗಾಗಿ ದೀಪ್ತಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿ, ಉಚಿತ ಸೀಟ್ ಸಂಪಾದಿಸಿಕೊಂಡಿದ್ದಳು. ಆದರೆ ಇತ್ತೀಚೆಗೆ ನಡೆದ ಪರೀಕ್ಷೆಯೊಂದರಲ್ಲಿ 10 ಅಂಕಗಳಷ್ಟು ಕಡಿಮೆ ಬಂದಿದೆ.
ದೀಪ್ತಿಗೆ ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದ್ದಕ್ಕೆ ಕಾಲೇಜಿನ ಪ್ರಾಶುಂಪಾಲರು ವಿಚಾರಿಸಿದ್ದಾರೆ. ಅಲ್ಲದೇ ಕಡಿಮೆ ಅಂಕ ಗಳಿಸಿದ್ದಕ್ಕಾಗಿ ಫೈನ್ ಹಾಕುವುದಾಗಿ ಗದಿರಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಉಡುಪಿ ಜಿಲ್ಲೆಯಲ್ಲಿರುವ ಪೆರ್ಡೂರಿನಲ್ಲಿನ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳ ಮುಂದೆ ನನ್ನ ಮಗಳನ್ನು ಪ್ರಾಂಶುಪಾಲರು ನಿಂದಿಸಿದ್ದಾರೆ. ಇದರಿಂದ ಆಕೆ ಮಾನಸಿಕವಾಗಿ ನೊಂದುಕೊಂಡಿದ್ದಳು. ಹೀಗಾಗಿ ನಮ್ಮ ಮಗಳು ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ ಎಂದು ದೀಪ್ತಿ ತಂದೆ ಸುರೇಶ್ ಮೆಂಡನ್ ಆರೋಪಿಸಿದ್ದಾರೆ.
ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.