ಪಿಎಸ್‌ಐ ಹುದ್ದೆ: 'ತಪ್ಪು' ಉತ್ತರವೂ 'ಸರಿ'!
ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ 545 ಹುದ್ದೆಗಳಿಗೆ ನೇಮಕಾತಿಗೆ ಪೊಲೀಸ್ ನೇಮಕಾತಿ ಮಂಡಳಿ ಅ. 3ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆಯೊಂದಕ್ಕೆ ಆಯ್ಕೆಗಾಗಿ ನೀಡಿದ್ದ ನಾಲ್ಕು ಉತ್ತರಗಳ ಪೈಕಿ ಎರಡು ಉತ್ತರಗಳು 'ಸರಿ' ಎಂದು ಪರಿಗಣಿಸಿರುವುದಕ್ಕೆ ಹುದ್ದೆ ಆಕಾಂಕ್ಷಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ಡಿ' ಸರಣಿಯ ಪ್ರಶ್ನೆ ಪತ್ರಿಕೆಯಲ್ಲಿ 71ನೇ ಪ್ರಶ್ನೆಯಾಗಿ 'ಲೋಕ ಅದಾಲತ್ ಬಗ್ಗೆ ಕೆಳಗಿನ ಸರಿಯಾದ ಹೇಳಿಕೆಗಳನ್ನು ಆಯ್ಕೆ ಮಾಡಿ ಎಂದು (1) ಲೋಕ ಅದಾಲತ್ ಅವಾರ್ಡನ್ನು ಸಿವಿಲ್ ನ್ಯಾಯಾಲಯದ ತೀರ್ಪು ಅಥವಾ ಯಾವುದೇ ಇತರ ನ್ಯಾಯಾಲಯದ ಆದೇಶವೆಂದು ಪರಿಗಣಿಸಲಾಗುತ್ತದೆ (2) ಲೋಕಾ ಅದಾಲತ್‌ನ ಅವಾರ್ಡ್ ವಿರುದ್ಧ ಸಂಬಂಧಪಟ್ಟ ಪಕ್ಷಗಳು (ಕಕ್ಷಿದಾರರು) ಮೇಲ್ಮನವಿ ಸಲ್ಲಿಸಬಹುದು ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ (ಎ) 1 ಮಾತ್ರ, (ಬಿ) 2 ಮಾತ್ರ, (ಸಿ) 1 ಮತ್ತು 2 ಎರಡೂ, (ಡಿ) 1 ಮತ್ತು 2 ಎರಡೂ ಅಲ್ಲ ಎಂಬ ಆಯ್ಕೆಗಳನ್ನು ನೀಡಲಾಗಿತ್ತು.
ನೇಮಕಾತಿ ಮಂಡಳಿ ನ. 5ರಂದು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿತ್ತು. ಅದರಲ್ಲಿ 'ಎ' ಸರಿಯಾದ ಆಯ್ಕೆ ಎಂದು ಹೇಳಲಾಗಿತ್ತು. ಆದರೆ, ಇದೇ 12ರಂದು ಪ್ರಕಟಿಸಿರುವ ಅಂತಿಮ ಕೀ ಉತ್ತರದಲ್ಲಿ 'ಎ' ಮತ್ತು 'ಸಿ' ಎರಡೂ ಆಯ್ಕೆಗಳು ಸರಿ ಎಂದು ತಿಳಿಸಲಾಗಿದೆ. ಆದರೆ, ತಾತ್ಕಾಲಿಕ ಕೀ ಉತ್ತರದಲ್ಲಿ ತಿಳಿಸಿದಂತೆ 'ಎ' ಮಾತ್ರ ಸರಿ ಉತ್ತರ.
'ಸಿ' ಕೂಡಾ ಸರಿ ಉತ್ತರ ಎಂದು ಪರಿಗಣಿಸಿರುವುದು ತಪ್ಪು ಎಂದು ಪರೀಕ್ಷೆ ಬರೆದಿರುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ತಾತ್ಕಾಲಿಕ ಕೀ ಉತ್ತರದಲ್ಲಿ ಸರಿಯಾಗಿದ್ದ ಅಂಶ, ಅಂತಿಮ ಕೀ ಉತ್ತರ ನೀಡುವ ವೇಳೆ ಬದಲಾಗಲು ಕಾರಣವೇನು' ಎಂದು ಪ್ರಶ್ನಿಸಿರುವ ಪರೀಕ್ಷಾರ್ಥಿಗಳು, ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇಲ್ಲದೇ ಇರುವುದರಿಂದ ನೇಮಕಾತಿ ಮಂಡಳಿ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.