PFI,SDPI ಬೆಳೆಯಲು ಸಿದ್ದರಾಮಯ್ಯ ಕಾರಣ
ವಿಜಯಪುರ,ಸೆ.27- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಪರಿಸ್ಥಿತಿ ಗಂಭೀರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳೆಯಲು ಕಾರಣವೇ ಸಿದ್ದರಾಮಯ್ಯ ಎಂದು ದೂರಿದ್ದಾರೆ.
ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲೆ ದೇಶ ವಿರೋಧಿ ಸಂಘಟನೆಗಳು ಬೆಳೆದಿವೆ. ನಮ್ಮ ಸರ್ಕಾರ ಈಗ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದೆ. ಅತಿ ಹೆಚ್ಚು ನಮ್ಮ ರಾಜ್ಯದವರನ್ನೇ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ.
ಪಿಎಫ್‍ಐ ನಿಷೇಧಕ್ಕೆ ದೇಶಭಕ್ತರ ಬೇಡಿಕೆ ಇದೆ. ಅದಕ್ಕೆ ಸಾಕ್ಷ್ಯಾಧಾರಗಳ ಸಂಗ್ರಹ ನಡೆಯುತ್ತಿದೆ. ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮದ ಜೊತೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.