ಅಮೆರಿಕ-ರಷ್ಯಾ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕಿಳಿದಿದೆ: ಪುಟಿನ್‌

ಅಮೆರಿಕ-ರಷ್ಯಾ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕಿಳಿದಿದೆ: ಪುಟಿನ್‌

ವಾಷಿಂಗ್ಟನ್‌: ಅಮೆರಿಕ-ರಷ್ಯಾ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಕೆಳಮಟ್ಟಕ್ಕೆ ಇಳಿದಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ.

ಮುಂದಿನ ವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ನಿಗದಿಯಾಗಿರುವ ಭೇಟಿಗೂ ಮುನ್ನ ಮಾಧ್ಯಮ ಸಂಸ್ಥೆ 'ಎನ್‌ಬಿಸಿ ನ್ಯೂಸ್‌'ಗೆ ನೀಡಿರುವ ಸಂದರ್ಶನದಲ್ಲಿ ಪುಟಿನ್‌ ಈ ಮಾತುಗಳನ್ನಾಡಿದ್ದಾರೆ.

'ನಾವು ದ್ವಿಪಕ್ಷೀಯ ಸಂಬಂಧ ಹೊಂದಿದ್ದೇವೆ. ಅದು ಇತ್ತೀಚಿನ ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕಿಳಿದಿದೆ, ಹದಗೆಟ್ಟಿದೆ' ಎಂದು ಪುಟಿನ್‌ ಸಂದರ್ಶನದಲ್ಲಿ ಹೇಳಿದ್ದಾರೆ. ಅದು 'ಎನ್‌ಬಿಸಿ ನ್ಯೂಸ್‌'ನಲ್ಲಿ ಶುಕ್ರವಾರ ಬಿತ್ತರವಾಗಿದೆ.

ಪುಟಿನ್‌ ಮತ್ತು ಬೈಡ್‌ನ್‌ ಮುಂದಿನ ಬುಧವಾರ ಜಿನಿವಾದಲ್ಲಿ ಭೇಟಿಯಾಗಲಿದ್ದಾರೆ.

ಸಂದರ್ಶನದಲ್ಲಿ ಪುಟಿನ್ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹೊಗಳಿದ್ದಾರೆ. 'ಟ್ರಂಪ್‌ ಅಸಾಧಾರಣ ವ್ಯಕ್ತಿ, ಪ್ರತಿಭಾವಂತ' ಎಂದಿದ್ದಾರೆ. ರಾಜಕಾರಣಿಯಾಗಿ ಬೈಡೆನ್‌ ಅವರು ಟ್ರಂಪ್‌ಗಿಂತ ಬಹಳ ಭಿನ್ನರು ಎಂದೂ ಪುಟಿನ್‌ ಅಭಿಪ್ರಾಯಪಟ್ಟಿದ್ದಾರೆ.

'ಬೈಡನ್‌ ನಿಮ್ಮನ್ನು ಕೊಲೆಗಾರ ಎಂದು ಕರೆದಿದ್ದಾರಲ್ಲ,' ಎಂಬ ಪ್ರಶ್ನೆಗೆ ಉತ್ತರಿಸಿರುವ ಪುಟಿನ್‌, 'ಇಂಥ ಡಜನ್‌ ಆರೋಪಗಳನ್ನು ಕೇಳಿದ್ದೇನೆ. ನಾನು ಕನಿಷ್ಠ ಚಿಂತೆಯನ್ನೂ ಮಾಡದಂಥ ವಿಚಾರವಿದು,' ಎಂದು ಅವರು ಹೇಳಿದ್ದಾರೆ.