ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಪ್ರೇಯಸಿ ಜತೆ ಪ್ರವಾಸ ಹೋಗುವುದಕ್ಕೆ ತನ್ನ ಮನೆಯಲ್ಲೇ ಚಿನ್ನ ಕಳ್ಳತನ; ಆರೋಪಿ ಅರೆಸ್ಟ್

ಬೆಂಗಳೂರು: ಬೆಂಗಳೂರಿಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಜೊತೆ ಅಂತಾರಾಜ್ಯ ಪ್ರವಾಸ ಕೈಗೊಳ್ಳಲು ತನ್ನದೇ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿದ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇರ್ಫಾನ್ ಎಂಬ ಯುವಕನಿಗೆ ಯುವತಿ ಮೇಲೆ ಲವ್ವೋ ಲವ್, ಆಕೆಯೊಂದಿಗೆ ಜಾಲಿ ರೈಡ್ ಹೋಗುವ ಕನಸು ಕೂಡ ಕಾಣುತ್ತಿದ್ದ.ಅದರಂತೆ ವರ್ಷಾಂತ್ಯದ ವೇಳೆ ಗೋವಾಕ್ಕೆ ಹೋಗುವ ಪ್ಲಾನ್ ಇಬ್ಬರೂ ಹಾಕಿಕೊಂಡಿದ್ದರು. ಗೋವಾಕ್ಕೆ ಹೋಗಿ ಜಾಲಿ ಮಾಡುವುದು ಸುಲಭವಲ್ಲ, ಅದಕ್ಕೆ ಹಣ ಅತ್ಯವಶ್ಯಕವಾಗಿದೆ. ಆದರೆ ಏನು ಮಾಡುವುದು? ಇರ್ಫಾನ್ ಜೇಬು ಖಾಲಿಯಾಗಿದೆ.
ಇದಕ್ಕಾಗಿ ತನ್ನ ಮನೆಯವರು ಕಷ್ಟಪಟ್ಟು ಬೆವರು ಸುರಿಸಿ ಮಾಡಿಟ್ಟಿದ್ದ ಚಿನ್ನದ ಮೇಲೆಯೇ ಕನ್ನ ಹಾಕಿದ್ದಾನೆ.
ಕೆಲಸಕ್ಕೆ ಹೋಗದೆ ಅಣ್ಣ, ಅತ್ತಿಗೆ ಹಾಗೂ ಅಮ್ಮನ ಜೊತೆಯಲ್ಲೇ ಇದ್ದ ಇರ್ಫಾನ್ಗೆ ತನ್ನ ಪ್ರೇಯಸಿಯನ್ನು ಗೋವಾಗೆ ಕರೆದುಕೊಂಡು ಹೊಗಲು ಕೈಯಲ್ಲಿ ಹಣ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಎಲ್ಲರು ಮಲಗಿದ್ದ ವೇಳೆಯಲ್ಲಿ ಎದ್ದ ಇರ್ಫಾನ್, 103 ಗ್ರಾಂ ಚಿನ್ನ ಕದ್ದಿದ್ದಾನೆ. ಇದನ್ನು ಮಾರಿ ಬಂದ ಹಣದಲ್ಲಿ ಗರ್ಲ್ಫ್ರೆಂಡ್ ಜೊತೆ ಗೋವಾ ಟ್ರಿಪ್ ಹೋಗಿದ್ದಾನೆ.