ತ್ರಿಪುರಾ ಚುನಾವಣೆ: ಪ್ರತಿಪಕ್ಷಗಳ ಒಗ್ಗಟ್ಟಿಗೆ 'ಟಿಪ್ರಲ್ಯಾಂಡ್‌' ಅಡ್ಡಿ?

ತ್ರಿಪುರಾ ಚುನಾವಣೆ: ಪ್ರತಿಪಕ್ಷಗಳ ಒಗ್ಗಟ್ಟಿಗೆ 'ಟಿಪ್ರಲ್ಯಾಂಡ್‌' ಅಡ್ಡಿ?

ಗುವಾಹಟಿ: ಫೆಬ್ರುವರಿ 16ರಂದು ನಿಗದಿಯಾಗಿರುವ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿಗೆ 'ಟಿಪ್ರಲ್ಯಾಂಡ್' ಪ್ರತ್ಯೇಕ ರಾಜ್ಯ ವಿಚಾರ ಅಡ್ಡಿಯಾದಂತೆ ಕಾಣುತ್ತಿದೆ.

ಪ್ರತಿಪಕ್ಷಗಳಾದ ಸಿಪಿಎಂ ಹಾಗೂ ಕಾಂಗ್ರೆಸ್ ನಡುವೆ ಸೀಟು ಹೊಂದಾಣಿಕೆ ಮಾತುಕತೆ ನಡೆಯುತ್ತಿದೆ. ಆದರೆ, ಗ್ರೇಟರ್ ಟಿಪ್ರಲ್ಯಾಂಡ್ ಪ್ರತ್ಯೇಕ ರಾಜ್ಯ ಹೋರಾಟದ ಮುಂಚೂಣಿಯಲ್ಲಿರುವ ಪ್ರಾದೇಶಿಕ ಪಕ್ಷಗಳ ಒಕ್ಕೂಟವಾದ 'ಟಿಪ್ರಮೋಥಾ' ಪ್ರತಿಪಕ್ಷಗಳ ಮೈತ್ರಿಕೂಟವನ್ನು ಇನ್ನಷ್ಟೇ ಸೇರಬೇಕಿದೆ. ಗ್ರೇಟರ್ ಟಿಪ್ರಲ್ಯಾಂಡ್ ರಚನೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮೋಥಾ ಮುಖ್ಯಸ್ಥ ಪ್ರದ್ಯೋತ್ ದೇಬಬರ್ಮಾ ಅವರು ಸ್ಪಷ್ಟಪಡಿಸಿದ್ದು, ಈ ಬೇಡಿಕೆಯ ಬಗ್ಗೆ ಲಿಖಿತ ಭರವಸೆ ನೀಡಿದರೆ ಮೈತ್ರಿಕೂಟ ಸೇರುವುದಾಗಿ ತಿಳಿಸಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ಇಳಿಸುವ ಉದ್ದೇಶದಿಂದ ಪ್ರತಿಪಕ್ಷಗಳ ಮೈತ್ರಿಕೂಟವನ್ನು ರಚಿಸಲಾಗುತ್ತಿದ್ದು, ಈ ಕುರಿತ ಮಾತುಕತೆಗೆ ಬರುವಂತೆ ಪ್ರದ್ಯೋತ್ ಅವರಿಗೆ ಸಿಪಿಎಂ ಹಾಗೂ ಕಾಂಗ್ರೆಸ್ ಪದೇ ಪದೇ ಮನವಿ ಮಾಡಿದ್ದರೂ ಅವರು ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ. ತ್ರಿಪುರಾದ ಭೌಗೋಳಿಕ ಹಾಗೂ ಸಾಂಸ್ಕೃತಿಕ ವಿಭಜನೆಯನ್ನು ವಿರೋಧಿಸುವುದಾಗಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಚೌಧರಿ ಅವರು ಹೇಳಿದ್ದಾರೆ. ಆದರೆ ಬುಡಕಟ್ಟುಗಳ ಕಲ್ಯಾಣಕ್ಕೆ ಸಂವಿಧಾನದತ್ತವಾಗಿ ದೊರೆಯಬೇಕಿರುವ ಹಕ್ಕುಗಳು ಹಾಗೂ ಗರಿಷ್ಠ ಸ್ವಾಯತ್ತೆಯ ಪರ ಇರುವುದಾಗಿ ಅವರು ತಿಳಿಸಿದ್ದಾರೆ.

ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿಯ (ಟಿಟಿಎಡಿಸಿ) ನಿಯಂತ್ರಣಕ್ಕೆ ಒಳಪಟ್ಟ ಪ್ರದೇಶಗಳನ್ನು ಟಿಪ್ರಲ್ಯಾಂಡ್ ಒಳಗೊಂಡಿದೆ. ಪ್ರತ್ಯೇಕ ರಾಜ್ಯ ರಚನೆ ವಿಚಾರ ಇಟ್ಟುಕೊಂಡೇ, ಬಿಜೆಪಿ ಹಾಗೂ ಅದರ ಮಿತ್ರಪಕ್ಷ 'ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ'ವನ್ನು (ಐಪಿಎಫ್‌ಟಿ) ಕಳೆದ ಮಾರ್ಚ್‌ನಲ್ಲಿ ನಡೆದ ಮಂಡಳಿ ಚುನಾವಣೆಯಲ್ಲಿ ಟಿಪ್ರಮೋಥಾ ಪರಾಭವಗೊಳಿಸಿತ್ತು. 60ರ ಪೈಕಿ 20 ವಿಧಾನಸಭಾ ಕ್ಷೇತ್ರಗಳು ವ್ಯಾಪಿಸಿರುವ ಟಿಟಿಎಡಿಸಿ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಹಾಗೂ ಐಪಿಎಫ್‌ಟಿಗೆ ಟಿಪ್ರಮೋಥಾ ಕಠಿಣ ಸ್ಪರ್ಧೆ ಒಡ್ಡುವ ಸಾಧ್ಯತೆಯಿದೆ.