ಹೊಸ ಮೇದಾರ ಓಣಿಯಲ್ಲಿ ಹೋಳಿ ಕಾಮಣ್ಣನ ಓಕುಳಿ
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಯಾವುದೇ ಹಬ್ಬ ಅಂದರೆ ಸಾಕು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಯುವಕರ ಮೆಚ್ಚಿನ ಗಣಪತಿ ಹಬ್ಬ ಹೋಳಿ ಹಬ್ಬ ಅಂದರೂ ಆಚರಣೆ ಬಗ್ಗೆ ಹೆಚ್ಚು ಹೇಳುವ ಮಾತೇ ಇಲ್ಲ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಅಂತ ಕರೆಸಿಕೊಳ್ಳುವ ಹುಬ್ಬಳ್ಳಿಯಲ್ಲಿ ಹೋಳಿ ಕಾಮಣ್ಣನ ಹಬ್ಬದ ಆಚರಣೆಯನ್ನು ಅತಿ ವಿಜೃಂಭಣೆಯಿಂದ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಅದರಲ್ಲೂ ಹೊಸ ಮೇದಾರ ಓಣಿಯ ಕಾಮಣ್ಣನ ವೈಭವವನ್ನು ನೋಡಲೇ ಬೇಕು. ಹೌದು. ಹುಬ್ಬಳ್ಳಿಯ ಮೇದಾರ ಓಣಿಯಲ್ಲಿ ಮೇದಾರ ಸಮುದಾಯದಿಂದ ಪ್ರತಿಷ್ಟಾಪನೆ ಮಾಡಿರುವ ಹೋಳಿ ಕಾಮಣ್ಣ ಸಾಕಷ್ಟು ವೈಭವವನ್ನು ಒಳಗೊಂಡಿರುತ್ತದೆ. ಅಲ್ಲದೇ ನಾವು ಚಿಕ್ಕಪುಟ್ಟದಾದ ಮೂರ್ತಿಯಲ್ಲಿ ಪ್ರತಿಷ್ಟಾಪನೆ ಮಾಡಿರುವುದನ್ನು ನೋಡಿದ್ದೇವೆ. ಮೇದಾರ ಓಣಿಯಲ್ಲಿ ಬೃಹತ್ ಆಕಾರದ ಹೋಳಿ ಕಾಮಣ್ಣನನ್ನು ಪ್ರತಿಷ್ಟಾಪನೆ ಮಾಡಲಾಗಿದ್ದು, ಯುವಕರ ಉತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸುಮಾರು ಒಂದು ತಿಂಗಳಿನಿಂದಲೇ ಹೋಳಿ ಕಾಮಣ್ಣನ ಸ್ಥಾಪನೆಗೆ ಸಿದ್ಧತೆ ನಡೆಸಲಾಗುತ್ತದೆ. ಬಿದಿರಿನ ಕಡ್ಡಿಯಿಂದ ಬೃಹತ್ ಗಾತ್ರದ ಕಾಮಣ್ಣನ ನಿರ್ಮಾಣ ಮಾಡಲಾಗುತ್ತದೆ. ಅಲ್ಲದೇ ಹೊಸ ಮೇದಾರ ಓಣಿಯಲ್ಲಿ ಕಾಮಣ್ಣನ ಪ್ರತಿಷ್ಟಾಪನೆ ಮಾಡಿ ವಿಶೇಷವಾಗಿ ಪೂಜೆ ಸಲ್ಲಿಸಿ ಹುಣ್ಣುಮೆ ಕಳೆದ ಐದು ದಿನಗಳ ಬಳಿಕ ರಂಗಪಂಚಮಿಯಂದು ದಹನ ಮಾಡುವ ಮೂಲಕ ಆಚರಣೆ ಮಾಡಲಾಗುತ್ತದೆ.
ಇನ್ನೂ ಹೊಸ ಮೇದಾರ ಓಣಿಯಲ್ಲಿರುವ ಕಾಮಣ್ಣ ಭಕ್ತರ ಇಷ್ಟಾರ್ಥಗಳು ಈಡೇರಿಸುವ ಆರಾಧ್ಯದೈವವಾಗಿದ್ದು, ಭಕ್ತರು ಹಲವಾರು ಹರಕೆ ಕಟ್ಟಿಕೊಂಡು ಇಲ್ಲಿ ವಿಶೇಷ ಪೂಜೆ ಸಲ್ಲಿಸುವುದು ವಿಶೇಷವಾಗಿದೆ.