ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ಅಭಿಷೇಕ ಹಿರೇಮಠ

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಕಾರಣನಾದ ಆರೋಪಿ ಅಭಿಷೇಕ ಹಿರೇಮಠ್ ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದನು.
ಹೌದು, ಕಳೆದ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಒಂದು ಕೋಮುವನ್ನು ಉದ್ರೇಕಿಸುವ ಪೋಸ್ಟ್ ಹಾಕಿದ್ದ ಅಭಿಷೇಕ್ ಹಿರೇಮಠ ಆ ನಂತರ ವೈರಲ್ ಆಗಿ ಗಲಭೆಗೆ ಕಾರಣವಾಗಿತ್ತು. ನಂತರ ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ಅಭಿಷೇಕ್ ಹಿರೇಮಠನನ್ನು ಏ.31 ರವರೆಗೆ ನ್ಯಾಯಾಂಗ ಬಂಧನದಲ್ಲಿರಲು ಹಾಗೂ ಬಿಗಿ ಪೋಲಿಸ ಭದ್ರತೆಯಲ್ಲಿ ಪಿಯುಸಿ ಪರೀಕ್ಷೆ ಬರೆಯಲು ಸೂಚನೆ ನೀಡಿತ್ತು. ಅದರಂತೆ ಇಂದು ಬಿಗಿ ಪೋಲಿಸ ಭದ್ರತೆಯಲ್ಲಿ ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೋನಿ ಡಾ. ಬಿ ಆರ್ ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಪಿಯುಸಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಬಿಸಿನೆಸ್ ಸ್ಟಡೀಸ್ ವಿಷಯದ ಪರೀಕ್ಷೆ ಬರೆದನು.
ಇನ್ನು ಅಭಿಷೇಕ ಹಿರೇಮಠನಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಯಿತು. ಪರೀಕ್ಷಾ ನಂತರ ನ್ಯಾಯಾಂಗ ಬಂಧನಕ್ಕೆ ತೆಗೆದುಕೊಂಡರು.