ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ: ಎಎಪಿ ಗಂಭೀರ ಆರೋಪ

ಗುಜರಾತ್ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೋರೇಷನ್(ಎಂಸಿಡಿ)ನ ಚುನಾವಣಾ ಸೋಲಿನ ಭೀತಿಯಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದು, ಇದಾಗಿ ಒಂದು ದಿನದ ನಂತರ ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದು, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಕೂಡಾ ನಗರ ಪೊಲೀಸ್ ಕಮಿಷನರ್‌ಗೆ ಎಎಪಿ ನಾಯಕರ ಆರೋಪಗಳನ್ನು ಪರಿಗಣಿಸುವಂತೆ ಸೂಚಿಸಿದ್ದಾರೆ. “ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ ಎಎಪಿ ನಾಯಕರ ಟ್ವೀಟ್‌ಗಳು ಮತ್ತು ಹೇಳಿಕೆಗಳನ್ನು ಲೆಫ್ಟಿನೆಂಟ್ ಗವರ್ನರ್ ಗಮನಿಸಿದ್ದಾರೆ. ಅಂತಹ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಪೊಲೀಸ್ ಆಯುಕ್ತರನ್ನು ಕೇಳಿದ್ದಾರೆ” ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
“ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಕೇಜ್ರಿವಾಲ್ ಮೇಲೆ ದಾಳಿ ಮಾಡಲು ತಮ್ಮ ಗೂಂಡಾಗಳಿಗೆ ಬಹಿರಂಗವಾಗಿ ಕೇಳಿಕೊಳ್ಳತ್ತಿದ್ಮದು, ಈ ಬಗ್ಗೆ ಅವರು ಸಂಪೂರ್ಣ ಯೋಜನೆಯನ್ನು ಮಾಡಿದ್ದಾರೆ. ಅವರ ಕ್ಷುಲ್ಲಕ ರಾಜಕೀಯಕ್ಕೆ ಎಎಪಿ ಹೆದರುವುದಿಲ್ಲ ಮತ್ತು ಅವರ ಗೂಂಡಾಗಿರಿಗೆ ಜನರು ತಕ್ಕ ಉತ್ತರ ನೀಡುತ್ತಾರೆ” ಎಂದು ಸಿಸೋಡಿಯಾ ಬರೆದಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಸೋಡಿಯಾ, “ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ನಾಯಕ ಮನೋಜ್ ತಿವಾರಿ ಅವರು ಗುರುವಾರ ಬಳಸಿದ ರೀತಿಯ ಭಾಷೆಯು ಬಹಿರಂಗ ಬೆದರಿಕೆಯಾಗಿದೆ. ಈ ಬೆದರಿಕೆಗಾಗಿ ಮನೋಜ್ ತಿವಾರಿ ಅವರನ್ನು ಬಂಧಿಸಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಹೇಳಿದ್ದರು.
ಹಿಂದಿನ ದಿನವಷ್ಟೆ ಮನೋಜ್ ತಿವಾರಿ, ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಭ್ರಷ್ಟಾಚಾರ ಮತ್ತು ಎಂಸಿಡಿ ಚುನಾವಣೆಗೆ ‘ಟಿಕೆಟ್ ಮಾರಾಟ’ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು.