ಮೀಸಲು ಪ್ರಮಾಣ ಹೆಚ್ಚಳದ ತಳಮಳ: ಶೇ.50 ಮೀಸಲಾತಿ ಗಡಿ ಮೀರುವ ಆತಂಕ

ಮೀಸಲು ಪ್ರಮಾಣ ಹೆಚ್ಚಳದ ತಳಮಳ: ಶೇ.50 ಮೀಸಲಾತಿ ಗಡಿ ಮೀರುವ ಆತಂಕ

ಬೆಂಗಳೂರು: ಜನಸಂಖ್ಯೆ ಆಧಾರದಲ್ಲಿ ಮೀಸಲು ಪ್ರಮಾಣ ಹೆಚ್ಚಿಸಬೇಕೆಂಬ ಬೇಡಿಕೆ ಬಹು ದಿನಗಳದ್ದು. ಆದರೆ, ಮೀಸಲು ಪ್ರಮಾಣದ ವಿಷಯದಲ್ಲಿ ಸುಪ್ರಿಂಕೋರ್ಟ್ ಆದೇಶಗಳು ಸರ್ಕಾರಗಳ ಕೈ ಕಟ್ಟಿಹಾಕಿವೆ. ಇಂತದ್ದರಲ್ಲಿ ರಾಜ್ಯ ಸರ್ಕಾರ ಮಹತ್ವದ ತೀರ್ವನಕ್ಕೆ ಮುನ್ನುಡಿ ಬರೆದಿದೆ.

ಮತ್ತೊಂದೆಡೆ ಈ ವಿಚಾರದಲ್ಲಿ ಸರ್ಕಾರ ಕಾನೂನು ಹೋರಾಟಕ್ಕೂ ಸಿದ್ಧವಾಗಬೇಕಾಗುವ ಲಕ್ಷಣವಿದೆ. ಸುಪ್ರಿಂಕೋರ್ಟ್​ನ ಆದೇಶದ ಪ್ರಕಾರವೇ ಮೀಸಲು ಪ್ರಮಾಣ ಶೇ.50 ಮೀಸಲು ಮೀರುವಂತಿಲ್ಲ. ಆದರೆ ಮೀಸಲು ಹೆಚ್ಚಿಸುವ ಬೇಡಿಕೆಗೆ ವಿವಿಧ ರಾಜ್ಯಗಳು ಸಂವಿಧಾನ ತಿದ್ದುಪಡಿಯ ಶೆಲ್ಟರ್ ಪಡೆಯುತ್ತಿವೆ. ಹೀಗೆ ಪಡೆದರೆ ಕಾನೂನಿನ ಪರಿದಿಗೆ ಬರಲ್ಲ ಎಂಬುದು ನಂಬಿಕೆಯಾದರೂ ಈ ಮಾರ್ಗದ ಬಗ್ಗೆ ಸಾಕಷ್ಟು ಜಿಜ್ಞಾಸೆ ಇದೆ.

ಕಾನೂನು ಇಲಾಖೆ ಸೇರಿ ಕಾನೂನು ಪಂಡಿತರಲ್ಲೂ ಪೂರ್ಣ ಸ್ಪಷ್ಟತೆ ಇಲ್ಲ. ಕಾನೂನು ಇಲಾಖೆ ಪ್ರಕಾರ ಈ ಮಾರ್ಗ ಸೂಕ್ತವಾಗಲಿಕ್ಕಿಲ್ಲ ಎಂಬ ವಾದವಿದೆ. ಮಾಜಿ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಹೇಳುವಂತೆ, ಈ ವಿಷಯದಲ್ಲಿ ಕೋರ್ಟ್ ಬೇರೆ ಬೇರೆ ಪ್ರಕರಣದಲ್ಲಿ ಒಂದೊಂದು ರೀತಿ ವ್ಯಾಖ್ಯಾನ ಮಾಡಿದೆ. ಅಂತಿಮವಾಗಿ ಕರ್ನಾಟಕದ ಮೀಸಲು ಹೆಚ್ಚಳ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೆ, ಆಗ ಸುಪ್ರಿಂಕೋರ್ಟ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಮುಖ್ಯವಾಗುತ್ತದೆ, ಈಗ ಏನೂ ಹೇಳಲು ಅಭಿಪ್ರಾಯ ನೀಡುವುದು ಕಷ್ಟವೆನ್ನುತ್ತಾರೆ. ಇನ್ನು ಶೆಡ್ಯುಲ್ 9ನಡಿ ಮೀಸಲು ಪ್ರಮಾಣ ಹೆಚ್ಚಳ ವಿಷಯ ತಂದರೂ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಾರದೆಂದೇನು ಇಲ್ಲ. ಆ ಮಾರ್ಗದಲ್ಲಿ ರಕ್ಷಣೆ ಸಿಗುತ್ತದೆ ಎಂದೇನು ಇಲ್ಲ. ಇದೇ ವೇಳೆ ತಮಿಳುನಾಡು ವಿಷಯದಲ್ಲಿ ಮೀಸಲು ಹೆಚ್ಚಿಸಿದರೂ ತಡೆ ನೀಡಿಲ್ಲ ಎಂಬುದು ಗಮನಾರ್ಹ ಸಂಗತಿ ಎಂದು

ಸಿಎಂ ಹೇಳಿದ್ದೇನು?: ತಮಿಳುನಾಡು ಸರ್ಕಾರ ಮೀಸಲು ಹೆಚ್ಚಿಸಿದ್ದರ ಸಂಬಂಧ ಕೋರ್ಟ್ ನಿಂದ 1994ರಲ್ಲಿ ಮತ್ತು 2007ರಲ್ಲಿ ತೀರ್ಪಗಳು ಬಂದಿದೆ. ಪಶ್ಚಿಮ ಬಂಗಾಲದಲ್ಲಿ 1950ರಲ್ಲಿ ಭೂ ಸುಧಾರಣಾ ಕಾಯ್ದೆ ಬಂದಾಗ ಸವೋಚ್ಛ ನ್ಯಾಯಾಲಯ ಕಾಯ್ದೆಯನ್ನು ರದ್ದು ಮಾಡಿತು. ಆ ಸಂದರ್ಭದಲ್ಲಿ ಭೂ ಸುಧಾರಣಾ ಕಾಯ್ದೆ ಮತ್ತು ರೈತರಿಗೆ ನ್ಯಾಯ ಕೊಡಿಸುವ ಸಲುವಾಗಿ ಮೂಲಭೂತ ಹಕ್ಕು ಎಂದು ಪರಿಗಣಿಸಿ ಅನುಸೂಚಿ 9ನ್ನು ತರಲಾಯಿತು. ಕೇವಲ ಮೀಸಲಾತಿಗೆ ಮಾತ್ರವಲ್ಲ ಹಲವಾರು ವಿಚಾರಗಳು ಇದರಲ್ಲಿ ಬರುತ್ತದೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ತಮಿಳುನಾಡಿಗೆ 1994ರಿಂದ ಈವರೆಗೆ ವಿನಾಯಿತಿ ದೊರೆತಿದೆ. ಈಗಲೂ ಕೂಡ ಅದರ ಬಗ್ಗೆ ತೀರ್ಪು ಹೊರಬಂದಿಲ್ಲ ಎಂದು ಮುಖ್ಯಮಂತ್ರಿ ಯವರು ರಾಜ್ಯ ಯಾವ ಆಶಯದಲ್ಲಿ ಮುನ್ನಡೆಯುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದರು.

ಮೀಸಲು ಪ್ರಮಾಣ ಶೇ.66ಕ್ಕೆ ಏರಿಕೆ: ರಾಜ್ಯದಲ್ಲಿ ಈಗಾಗಲೆ ಶೇ.50 ಮೀಸಲಿದೆ. ಈಗ ಎಸ್ಸಿ, ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸಲು ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯದಂತೆ ರಾಜ್ಯದಲ್ಲಿ ಮೀಸಲು ಪ್ರಮಾಣ ಶೇ.6 ಹೆಚ್ಚುವರಿಯಾಗಲಿದೆ. ಅಂದರೆ ಶೇ.56 ಆಗಲಿದೆ. ಇದರೊಟ್ಟಿಗೆ ಮುಂದುವರಿದ ಸಮುದಾಯಗಳ ಆರ್ಥಿಕ ಹಿಂದುಳಿದವರಿಗೆ ನೀಡುವ ಶೇ.10 ಮೀಸಲು ಸೇರಿಸಿದರೆ ಶೇ.66ಕ್ಕೆ ತಲುಪಲಿದೆ.

ಮೀಸಲು ಬೇಡಿಕೆ ಏಕೆ?: 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಎಸ್​ಸಿ ಶೇ.17.15 ಹಾಗೂ ಎಸ್ಟಿ ಸಮುದಾಯದವರು ಶೇ. 6.95 ಇದೆ, ಇವರಿಬ್ಬರು ಸೇರಿದರೆ ಒಟ್ಟು ಶೇ.24.10 ಜನಸಂಖ್ಯೆ ಹೊಂದಿದ್ದಾರೆ. ಆದರೆ ಇವರಿಗೆ ಮೀಸಲಾತಿ ಇರುವುದು ಶೇ.18 ಮಾತ್ರ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಿಸಬೇಕೆಂಬ ಬೇಡಿಕೆ ಬಲವಾಯಿತು.

ಮುಖ್ಯಮಂತ್ರಿ ಬೊಮ್ಮಾಯಿ ದಿಟ್ಟ ಹೆಜ್ಜೆ

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲು ಹೆಚ್ಚಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಈ ಹಿಂದೆ ಅನೇಕ ಸರ್ಕಾರಗಳು ಬಂದರೂ ಈ ಬೇಡಿಕೆ ಈಡೇರಿಸುವ ಪ್ರಯತ್ನಕ್ಕೆ ಅಷ್ಟಾಗಿ ಆಸಕ್ತಿ ತೋರಿಸಿರಲಿಲ್ಲ. ಏಕೆಂದರೆ ಮೀಸಲು ಪರಿಷ್ಕರಣೆ ಎಂಬುದು ಸಾಹಸದ ಕೆಲಸ. ಇದರ ಅರಿವಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದು, ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಮೀಸಲು ಬದಲಾವಣೆ ಅಥವಾ ಪರಿಷ್ಕರಣೆ ಎಂಬುದು ಸರ್ಕಾರದ ಪಾಲಿಗೆ ಜೇನುಗೂಡಿಗೆ ಕಲ್ಲು ಹೊಡೆದಂತಹ ಅನುಭವವೇ, ಅಂಥದ್ದರಲ್ಲಿ ಇದೀಗ ಸರ್ಕಾರ ಚುನಾವಣೆಗೆ ಏಳೆಂಟು ತಿಂಗಳಿರುವಾಗ ಮಹತ್ವದ ತೀರ್ಮಾನ ಮಾಡಿರುವುದು ವಿಶೇಷ ಸಂಗತಿ. ಮೀಸಲು ಪರಿಷ್ಕರಣೆ ಮಾಡುತ್ತೇವೆ ಎಂಬುದು ನಮ್ಮ ಬದ್ಧತೆ ಎಂದು ಹೇಳಿಕೊಂಡು ಬಂದಿದ್ದ ಬೊಮ್ಮಾಯಿ ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಒಂದಷ್ಟು ಸವಾಲು ಎದುರಾಗುವುದನ್ನು ಅರಿತು, ಎಲ್ಲ ಬೇಡಿಕೆ ಈಡೇರಿಸುವ ವಿಶ್ವಾಸ ವ್ಯಕ್ತಪಡಿಸುತ್ತಲೇ ಮೊದಲು ಎಸ್ಸಿ ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸುವ ತೀರ್ಮಾನ ಪ್ರಕಟಿಸಿ ಗಮನ ಸೆಳೆದಿದ್ದಾರೆ. ಇನ್ನೊಂದು ಸಂಗತಿ ಎಂದರೆ, ಈ ವಿಷಯದಲ್ಲಿ ಸಂಪೂರ್ಣವಾಗಿ ಅಧ್ಯಯನ ಮಾಡಿ ಈ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿ ಸಾಮರಸ್ಯ ಮೂಡಬೇಕೆಂಬ ಕಾರಣದಿಂದ ಹಾಗೂ ಕಾನೂನು ಮತ್ತು ಸಂವಿಧಾನಾತ್ಮಕವಾದ ವಿಚಾರ ಇದಾಗಿರುವುದರಿಂದ ಸರ್ವ ಪಕ್ಷ ಸಭೆಯಲ್ಲಿ ಚರ್ಚೆ ಮಾಡಿ, ಸರ್ವಸಮ್ಮತದಿಂದ ತೀರ್ಮಾನ ಮಾಡಲಾಗಿದೆ ಎಂದು ಹೇಳಿರುವ ಸಿಎಂ, ತಮ್ಮ ರಾಜಕೀಯ ಅನುಭವವನ್ನು ಈ ವಿಚಾರದಲ್ಲಿ ಧಾರೆ ಎರೆದಂತೆ ಕಾಣಿಸಿದೆ. ಇಂತಹ ಒಂದು ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ತಮ್ಮ ಅಕ್ಕಪಕ್ಕದಲ್ಲಿ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿಯವರನ್ನು ಕೂರಿಸಿಕೊಂಡೇ ಚರ್ಚೆ ನಡೆಸಿ, ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ನಿರ್ಣಯಿಸಿದ್ದೂ ಸಹ ವಿಶೇಷ.

ಸರ್ಕಾರದ ಮೇಲೆ ಒತ್ತಡ

ಎಸ್ಸಿ, ಎಸ್ಟಿ ಮೀಸಲು ಹೆಚ್ಚಿಸಬೇಕೆಂದು ಜನಪ್ರತಿನಿಧಿಗಳ ಮೇಲೆ ಒತ್ತಡ ಹೆಚ್ಚಾದಂತೆ ಸರ್ಕಾರಕ್ಕೂ ಅದರ ಬಿಸಿ ತಟ್ಟಲಾರಂಭಿಸಿತ್ತು. ಇತ್ತೀಚಿನ ವಿಧಾನ ಮಂಡಲ ಅಧಿವೇಶನಗಳಲ್ಲಿ ಎಸ್ಟಿ ಮೀಸಲು ವಿಷಯ ಚರ್ಚೆಯಾಗುತ್ತಲೇ ಇತ್ತು, ಪಕ್ಷಾತೀತವಾಗಿ ಆ ಸಮುದಾಯದ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದರು. ಹೀಗಾಗಿ ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೀಘ್ರವೇ ಸರ್ವಪಕ್ಷ ಸಭೆ ಕರೆಯುವುದಾಗಿ ಘೋಷಿಸಿದ್ದರು. ಆ ಪ್ರಕಾರ ಶುಕ್ರವಾರ ತಮ್ಮ ಗೃಹ ಕಚೇರಿಯಲ್ಲಿ ಸಭೆ ಕರೆದಿದ್ದು, ಎರಡೂ ವಿಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದರು. ಈ ವೇಳೆ ಸರ್ಕಾರ ತಡ ಮಾಡದೇ ನಾಗಮೋಹನ್ ದಾಸ್ ವರದಿ ಜಾರಿ ಮಾಡಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸರ್ವಪಕ್ಷದ ನಾಯಕರು ಈ ಬಗ್ಗೆ ರ್ಚಚಿಸಿದ್ದು, ಜನಗಣತಿ ಆಧಾರದ ಮೇಲೆ ಮೀಸಲಾತಿ ಏರಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಆದಷ್ಟು ಬೇಗನೆ, ಸಮಯ ವ್ಯರ್ಥ ಮಾಡದೆ ಮೀಸಲಾತಿಯನ್ನು ಹೆಚ್ಚಿಸಿ ಜಾರಿಗೆ ತರಬೇಕು ಎಂದು ನಾನು ಸಲಹೆ ಮಾಡಿದ್ದೇನೆ ಎಂದರು. ರಾಜ್ಯದಲ್ಲಿ ಇರುವ ಹಲವಾರು ಸಣ್ಣ ಪುಟ್ಟ ಸಮಾಜದರು 75 ವರ್ಷದಲ್ಲಿ ಎಂದೂ ಮೀಸಲಾತಿ ಕಾಣದೆ ಇರುವವರೂ ಇದ್ದಾರೆ. 2005 ರಲ್ಲಿ ಒಳ ಮೀಸಲಾತಿ ವಿಚಾರವಾಗಿ ಕಮಿಟಿ ರಚನೆ ಮಾಡಿತ್ತು. ಆಗಿನ ಸರ್ಕಾರಕ್ಕೆ ವರದಿ ಕೊಟ್ಟು ಹತ್ತು ವರ್ಷಗಳಾಗಿವೆ. ಇನ್ನೂ ಅದರ ಕಾರ್ಯಗತವಾಗಿಲ್ಲ. ಅದಕ್ಕೆ ಕೋಟ್ಯಾಂತರ ರೂ. ಹಣ ಖರ್ಚಾಗಿದೆ. ಇದರ ಬಗ್ಗೆಯೂ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಹೇಳಿದ್ದೇವೆ ಎಂದು ತಿಳಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ರಾಜ್ಯದ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ನ್ಯಾ.ನಾಗಮೋಹನದಾಸ ಸಮಿತಿಯ ಶಿಫಾರಸಿಗೆ ಅನುಗುಣವಾಗಿ ಹೆಚ್ಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದೇನೆ. ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆ ವಿಳಂಬವಾಗದಂತೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದ್ದೇನೆ. ಜತೆಗೆ ಎಸ್ಸಿಪಿ ಟಿಎಸ್ಪಿ ಯೋಜನೆಯಲ್ಲಿ ಖರ್ಚು ಮಾಡುವ ಹಣದಲ್ಲಿ ಶೇ.10ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಮತ್ತು ಅಲೆಮಾರಿ ಸಮುದಾಯಕ್ಕೆ ಒಂದು ನಿಗಮ ರಚನೆ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಇದನ್ನು ಕೂಡಾ ರಾಜ್ಯ ಸರ್ಕಾರ ಒಪ್ಪಿಕೊಂಡು ಜಾರಿಗೊಳಿಸಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿಸಿದರು.

ಎಸ್ಟಿ-ಎಸ್ಟಿ ಮೀಸಲು ಪರಿಷ್ಕರಣೆಗಾಗಿ ಉಳಿದ ಜಾತಿಗಳ ಮೀಸಲು ಪ್ರಮಾಣ ಕಡಿಮೆ ಮಾಡುತ್ತಿಲ್ಲ. ಹಿಂದುಳಿದ ವರ್ಗಗಳ ಮೀಸಲನ್ನೂ ಮುಟ್ಟುತ್ತಿಲ್ಲ. ಶೇ.50 ಮೀಸಲು ಗಡಿ ದಾಟಿದರೆ ಸಾಮಾನ್ಯವರ್ಗದವರಿಗೆ ಸ್ವಲ್ಪ ಸಮಸ್ಯೆಯಾಗುತ್ತದೆ.

| ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವ

ವಾಲ್ಮೀಕಿ ಪೀಠದ ಸ್ವಾಮೀಜಿ ಹೋರಾಟ: ಎಸ್ಟಿ ಮೀಸಲು ವಿಷಯದಲ್ಲಿ ವಾಲ್ಮೀಕಿ ಸಮುದಾಯದ ಪೀಠದ ಸ್ವಾಮೀಜಿ ಪ್ರಸನ್ನಾನಂದಪುರಿ ಸ್ವಾಮೀಜಿಯವರ ಹೋರಾಟ ಅವಿರತವಾಗಿದ್ದು ಈ ಸಂದರ್ಭದಲ್ಲಿ ಸ್ಮರಿಸಬಹುದು. ಸ್ಮಾವೀಜಿಯವರು 150 ದಿನಗಳ ನಿರಂತರ ಹೋರಾಟ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರೇ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಹೋರಾಟ ಬಿಟ್ಟರೆ ನಮ್ಮ ಬೇಡಿಕೆ ಹಿಂದೆ ಸರಿಯಲಿದೆ ಎಂದು ಸ್ವಾಮೀಜಿ ಹೆಜ್ಜೆ ಹಿಂದಿಟ್ಟಿರಲಿಲ್ಲ.

2019ರಲ್ಲಿ ಸಮಿತಿ ರಚನೆ

  • ಎಸ್ಸಿ ಎಸ್ಟಿ ಮೀಸಲು ಬೇಡಿಕೆ ಹೋರಾಟ ಆರಂಭವಾಗಿ ಎರಡು ದಶಕ ಕಳೆದಿದೆ. ಆದರೆ, 2011ರ ಜನಗಣತಿ ವರದಿ ಬಂದ ನಂತರ ಕಾವು ಪಡೆದುಕೊಂಡಿತು.
  • ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಹೋರಾಟ ನಡೆದು ವಿಚಾರ ಹೆಪ್ಪುಗಟ್ಟುತ್ತಿದ್ದಂತೆ ಚುನಾವಣೆ ಪ್ರಣಾಳಿಕೆಗಳಲ್ಲಿ ಈ ವಿಷಯ ಪ್ರಸ್ತಾಪವಾಗಲು ಆರಂಭವಾಯಿತು.
  • ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ವೇಳೆ 2019ರಲ್ಲಿ ನ್ಯಾ. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿತ್ತು.
  • ಮೈತ್ರಿ ಸರ್ಕಾರ ಪತನದ ಬಳಿಕ ಸಮಿತಿ ಶಕ್ತಿ ಹೀನ ಸ್ಥಿತಿಯಲ್ಲಿತ್ತು. ಆದರೆ, ಈ ವೇಳೆ ಬಲಕೊಟ್ಟವರು ಬಿ.ಎಸ್.ಯಡಿಯೂರಪ್ಪ, ವರದಿ ನೀಡಲು ಅಗತ್ಯ ಕ್ರಮಕ್ಕೆ ನಿರ್ದೇಶನ ಕೊಟ್ಟರು.
  • ಈ ಸಮಿತಿ 2020ರ ಜುಲೈ 2ರಂದು ವರದಿ ಸಲ್ಲಿಸಿತ್ತು. ಆದರೆ, ಅಷ್ಟರಲ್ಲಿ ವಿವಿಧ ಸಮುದಾಯಗಳು ಮೀಸಲು ಹೆಚ್ಚಳ, ಮೀಸಲು ಬದಲಾವಣೆಗೆ ಬೇಡಿಕೆ ಇಟ್ಟಿದ್ದರಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು.
  • ಎಲ್ಲ ಮೀಸಲು ವಿಚಾರ ಪರಾಮರ್ಶೆ ಮಾಡಿ ವರದಿ ನೀಡಲು 2021ರ ಮಾರ್ಚ್​ನಲ್ಲಿ ನ್ಯಾ.ಸುಭಾಷ್ ಅಡಿ ಸಮಿತಿ ರಚನೆ ಮಾಡಿತು. ಈ ಸಮಿತಿ ಎಲ್ಲರ ಅಹವಾಲು ಆಲಿಸುತ್ತಿರುವಾಗಲೇ ಈ ಸಮಿತಿ ಪ್ರಕ್ರಿಯೆಗೆ ಕೋರ್ಟ್ ತಡೆ ನೀಡಿತು.
  • ಸೆಪ್ಟೆಂಬರ್​ನಲ್ಲಿ ನಡೆದ ಅಧಿವೇಶನದ ವೇಳೆ ಎಸ್ಟಿ ಮೀಸಲು ವಿಚಾರ ಪ್ರಸ್ತಾಪವಾದಾಗ, ಶೀಘ್ರವೇ ಸರ್ವಪಕ್ಷ ಸಭೆ ಕರೆಯುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದರು. ಆ ಪ್ರಕಾರ ಶುಕ್ರವಾರ ಸಭೆ ನಡೆಸಿದ್ದಾರೆ.

ವಿವರಿಸಿದರು.