ಸ್ವಾಯತ್ತ ಕಾಲೇಜುಗಳಿಗೆ ಹೊಸ ಮಾರ್ಗಸೂಚಿ: ಯುಜಿಸಿ

ಸ್ವಾಯತ್ತ ಕಾಲೇಜುಗಳಿಗೆ ಹೊಸ ಮಾರ್ಗಸೂಚಿ: ಯುಜಿಸಿ

ವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗವು ಸ್ವಾಯತ್ತ ಕಾಲೇಜುಗಳಿಗಾಗಿ ಹೊಸ ಮಾರ್ಗಸೂಚಿ ರಚಿಸಿದ್ದು, ಇದನ್ನು ಮಂಗಳವಾರ ಬಿಡುಗಡೆ ಮಾಡಲಿದೆ.

'ಸ್ವಾಯತ್ತ ಕಾಲೇಜುಗಳು ಪ್ರತ್ಯೇಕ ನೋಂದಣಿ ನಿಯಮಗಳನ್ನು ಹೊಂದಲು, ಕೋರ್ಸ್‌ ಹಾಗೂ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲು, ತಮ್ಮದೇ ಮೌಲ್ಯಮಾಪನ ವಿಧಾನಗಳನ್ನು ಅಳವಡಿಸಿಕೊಳ್ಳಲು, ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಉತ್ತೇಜಿಸಲು ನೂತನ ಮಾರ್ಗಸೂಚಿ ಅವಕಾಶ ಕಲ್ಪಿಸುತ್ತದೆ' ಎಂದು ಹೇಳಲಾಗಿದೆ.

'ಯುಜಿಸಿ ರಚಿಸಿದ್ದ ತಜ್ಞರ ಸಮಿತಿಯು ಈ ಮಾರ್ಗಸೂಚಿ ಸಿದ್ಧಪಡಿಸಿದೆ. ಸೆಪ್ಟೆಂಬರ್‌ 22ರಂದು ನಡೆದಿದ್ದ ಯುಜಿಸಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ. ಮಂಗಳವಾರ ಇದನ್ನು ಬಹಿರಂಗಪಡಿಸಲಾಗುತ್ತದೆ' ಎಂದು ತಿಳಿಸಲಾಗಿದೆ.

'ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಈ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಇನ್ನು ಮುಂದೆ ತಮಗೆ ಬೇಕಾದ ಕೋರ್ಸ್‌ಗಳನ್ನು ಅಳವಡಿಸಿಕೊಳ್ಳಲು ಸ್ವಾಯತ್ತ ಕಾಲೇಜುಗಳಿಗೆ ಪೂರ್ಣ ಸ್ವಾತಂತ್ರ್ಯ ದೊರೆಯಲಿದೆ' ಎಂದು ಯುಜಿಸಿ ಮುಖ್ಯಸ್ಥ ಎಂ.ಜಗದೀಶ್‌ ಕುಮಾರ್‌ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.