ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಪುಸಲಾಯಿಸಿ ಮದುವೆ: ಅತ್ಯಾಚಾರ ಪ್ರಕರಣ

ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಪುಸಲಾಯಿಸಿ ಮದುವೆ: ಅತ್ಯಾಚಾರ ಪ್ರಕರಣ

ದಾವಣಗೆರೆ: ತಂದೆ ತಾಯಿ ಇಲ್ಲದ ಅನಾಥ ಹೆಣ್ಣುಮಕ್ಕಳನ್ನು ಪುಸಲಾಯಿಸಿ ಇಬ್ಬರು ಯುವಕರು ಮದುವೆಯಾಗಿದ್ದರು. ಇದೀಗ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ದಾವಣಗೆರೆಯಲ್ಲಿ ತಂದೆ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ತಾಯಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಈ ದಂಪತಿಗೆ ನಾಲ್ವರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ ಇದ್ದಾರೆ. ಈ ಐದು ಮಕ್ಕಳನ್ನು ಕಣ್ಣು ಕಾಣದ ಅಜ್ಜಿ ಸಾಕಿಕೊಂಡಿದ್ದರು.

ದೊಡ್ಡವಳಿಗೆ 15 ವರ್ಷ. ಅವಳನ್ನು ಎರಡು ತಿಂಗಳ ಹಿಂದೆ ಪರಿಚಿತ ಯುವಕನೊಬ್ಬ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಆಗಿದ್ದ. ಆ ಯುವಕನ ಪಕ್ಕದ ಮನೆಯ ಮತ್ತೊಬ್ಬ ಯುವಕ 13 ವರ್ಷದ ಬಾಲಕಿಯನ್ನು ಇದೀಗ ಮದುವೆಯಾಗಿದ್ದಾನೆ. ಅದು ಬೆಳಕಿಗೆ ಬರುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಸಹಿತ ಅಧಿಕಾರಿಗಳು ಆ ಮನೆಗೆ ಭೇಟಿ ನೀಡಿದ್ದಾರೆ. ಇಬ್ಬರು ಯುವಕರು ತಪ್ಪಿಸಿಕೊಂಡಿದ್ದಾರೆ.

ಎಲ್ಲ ಐದು ಮಕ್ಕಳನ್ನು ಸುಪರ್ದಿಗೆ ತೆಗೆದುಕೊಂಡಿದ್ದೇವೆ. ಬಾಲ ಮಂದಿರಕ್ಕೆ ಕಳುಹಿಸಿದ್ದೇವೆ. ಅಪಹರಣ, ಬಾಲ್ಯವಿವಾಹ, ಅತ್ಯಾಚಾರ ಪ್ರಕರಣ ದಾಖಲಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್. ವಿಜಯ ಕುಮಾರ್ ಪ್ರಜಾವಾಣಿಗೆ ತಿಳಿಸಿದ್ದಾರೆ.