ಭೀಕರ ರಸ್ತೆ ಅಪಘಾತ: ಮೂವರು ಯುವಕರು ದಾರುಣ ಸಾವು
ದಾವಣಗೆರೆ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೇಭಾಗಿ ಬಳಿ ಸಂಭವಿಸಿರುವ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಬೊಲೆರೊ ವಾಹನ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ಮಲ್ಲೇಶಪುರ ಗ್ರಾಮದ ಮಂಜುನಾಥ್(17), ಅಜ್ಜಯ್ಯ(18) ಮತ್ತು ದೇವರಾಜ್(17) ಮೃತ ದುರ್ದೈವಿಗಳು.
ಇಬ್ಬರು ಯುವಕರು ಅಪಘಾತ ನಡೆದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮತ್ತೊಬ್ಬ ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾನೆ.
ಯುವಕರು ಚನ್ನಗಿರಿ ತಾಲ್ಲೂಕ್ ಮಲ್ಲೇಶಪುರ ನಿವಾಸಿಗಳು. ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಹೋಗ್ತಿದ್ದಾಗ ಈ ದುರಂತ ಸಂಭವಿಸಿದೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.