ರಾಮ್‌ಬಾಗ್ ಘಾಟ್ ಪ್ರದೇಶದ ಯಮುನಾ ದಂಡೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ
ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಥುರಾ ಮತ್ತು ಆಗ್ರಾ ನಗರಗಳ ನಡುವೆ ರಾಮ್‌ಬಾಗ್ ಘಾಟ್ ಪ್ರದೇಶದಲ್ಲಿ ಹರಿಯುವ ಯಮುನಾ ನದಿಯ ನೀರಿನಲ್ಲಿ ಸಾವಿರಾರು ಮೀನುಗಳು ಸತ್ತಿರುವ ಘಟನೆ ವರದಿಯಾಗಿದೆ.
ಅದಾಗಲೇ ಅಪಾಯದ ಮೇರೆ ಮೀರಿ ಕಲುಷಿತಗೊಂಡಿರುವ ಯಮನಾ ನದಿಗೆ ಕೈಗಾರಿಕಾ ತ್ಯಾಜ್ಯದ ಬಿಡುಗಡೆಯಿಂದಾಗಿ ಮಾಲಿನ್ಯದ ಮಟ್ಟ ಇನ್ನಷ್ಟು ಹೆಚ್ಚಿರುವ ಆತಂಕಗಳು ಕೇಳಿ ಬರುತ್ತಿವೆ.
"ಮಥುರಾದ ಗೋಕುಲ ಬ್ಯಾರೇಜ್‌ನಲ್ಲಿ ನೀರಿನ ಹರಿವನ್ನು ಕೆಲಕಾಲ ನಿಲ್ಲಿಸಲಾಗಿತ್ತು. ಇದರಿಂದಾಗಿ ನೀರಿನಲ್ಲಿ ಕರಗಿದ ಮಣ್ಣಿನ ಕಾರಣ ನೀರಿನಲ್ಲಿದ್ದ ಕರಗಿದ ಆಮ್ಲಜನಕದ ಪ್ರಮಾಣ ತಗ್ಗಿದ್ದು, ಜಲಚರ ಜೀವಿಗಳಿಗೆ ಅಗತ್ಯವಿರುವ ಪ್ರಮಾಣದಲ್ಲಿ ಆಮ್ಲಜನಕ ಸಿಗದೇ ಇದ್ದಿರಬಹುದು," ಎಂದು ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ವಿಶ್ವನಾಥ್ ಶರ್ಮಾ ತಿಳಿಸಿದ್ದಾರೆ. ಆದರೆ ಈ ಮಾತುಗಳನ್ನು ಗೋಕುಲ ಬ್ಯಾರೇಜ್‌ನ ಅಧಿಕಾರಿಗಳು ತಳ್ಳಿಹಾಕಿದ್ದಾರೆ.
ನದಿ ದಂಡೆಗೆ ಬಂದು ಮೀನುಗಳಿಗೆ ಆಹಾರ ನೀಡಲು ಬಂದ ಮಂದಿಯಿಂದ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತವಾದ ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕೊಂಡೊಯ್ದಿದ್ದು, ಪರೀಕ್ಷೆಯ ವರದಿಗಳು ಬರಬೇಕಿದೆ.
ನೀರಿನಲ್ಲಿರುವ ಕರಗಿದ ಆಮ್ಲಜನಕದ ಪ್ರಮಾಣವು 4.5ಮಿಲಿಗ್ರಾಂ/ಲೀಟರ್‌ನಷ್ಟಿದ್ದರೆ ಜಲಚರಗಳು ಬದುಕಬಲ್ಲವು. ಆದರೆ ರಾಮ್‌ಬಾಗ್ ಘಾಟ್‌ನ ನೀರಿನಲ್ಲಿ ಕರಗಿದ ಆಮ್ಲಜನಕದ ಪ್ರಮಾಣವು 3ಮಿ.ಗ್ರಾಂ/ಲೀಟರ್‌ನಷ್ಟಿದೆ.
ತಾಜ್ ಮಹಲ್ ತೀರದಲ್ಲಿರುವ ಯಮುನಾ ತೀರದಲ್ಲಿರುವ ನೀರಿನಲ್ಲಿರುವ ಕ್ಲೋರಿನ್ ಪ್ರಮಾಣದ ಸೂಚ್ಯಂಕವು 90,000ದಷ್ಟಿದೆ. ಇದು ಅಪಾಯದ ಮಟ್ಟಕ್ಕಿಂತ 85,000ದಷ್ಟು ಹೆಚ್ಚಿದೆ.