ಐಪಿಎಲ್‌ನಲ್ಲಿ ತಮ್ಮ ನೆಚ್ಚಿನ ಈ 5 ಯುವ ಆಟಗಾರರನ್ನು ಆಯ್ಕೆ ಮಾಡಿದ ಸೌರವ್ ಗಂಗೂಲಿ

ಐಪಿಎಲ್‌ನಲ್ಲಿ ತಮ್ಮ ನೆಚ್ಚಿನ ಈ 5 ಯುವ ಆಟಗಾರರನ್ನು ಆಯ್ಕೆ ಮಾಡಿದ ಸೌರವ್ ಗಂಗೂಲಿ

2023ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಟಿ20 ಕ್ರಿಕೆಟ್ ಹಬ್ಬವನ್ನು ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ತಮ್ಮ ನೆಚ್ಚಿನ ಆಟಗಾರರನ್ನು ಪ್ರೋತ್ಸಾಹಿಸಲು ಎದುರು ನೋಡುತ್ತಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನ ನಂತರ ಪುರುಷರ ಐಪಿಎಲ್‌ಗೆ ಚಾಲನೆ ಸಿಗಲಿದೆ.

ಇನ್ನು ಭಾರತದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ವೀಕ್ಷಿಸಲು ತಮ್ಮ ನೆಚ್ಚಿನ ಐದು ಯುವ ಆಟಗಾರರನ್ನು ಹೆಸರಿಸಿದ್ದಾರೆ.

ಐಪಿಎಲ್‌ನ ಅಧಿಕೃತ ಪ್ರಸಾರಕ ಚಾನೆಲ್ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಸೌರವ್ ಗಂಗೂಲಿ, ತಮ್ಮ ನೆಚ್ಚಿನ ಈ ಐದು ಆಟಗಾರರು ಮತ್ತು ಅವರು ಭವಿಷ್ಯದಲ್ಲಿ ಕ್ರಿಕೆಟ್ ಕೊಂಡೊಯ್ಯುವ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ.

"ಈ ಬಾರಿಯ ಲೀಗ್‌ನಲ್ಲಿ ಅತ್ಯುತ್ತಮವಾದವರು ನಿಸ್ಸಂಶಯವಾಗಿ ಸೂರ್ಯಕುಮಾರ್ ಯಾದವ್. ನೀವು ಆತನನ್ನು ಇನ್ಮುಂದೆ ಯುವ ಆಟಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಯುವ ಆಟಗಾರರಲ್ಲಿ ಪೃಥ್ವಿ ಶಾ ಮತ್ತು ರಿಷಭ್ ಪಂತ್ ಅವರು ಟಿ20 ಸ್ವರೂಪದಲ್ಲಿ ಸಾಕಷ್ಟು ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ," ಎಂದು ಸೌರವ್ ಗಂಗೂಲಿ ಹೇಳಿದರು.

ಪೃಥ್ವಿ ಶಾ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದು, ಅದೇ ತಂಡದ ನಾಯಕ ರಿಷಭ್ ಪಂತ್ ಡಿಸೆಂಬರ್ 2022ರಲ್ಲಿ ಭೀಕರ ಕಾರು ಅಪಘಾತದಿಂದ ಗಾಯಗೊಂಡು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

"ನನ್ನ ಆಯ್ಕೆಯಲ್ಲಿರುವ ಪೃಥ್ವಿ ಶಾ ವಯಸ್ಸು ಇನ್ನೂ ಕೇವಲ 23. ಆತ ವಿಶ್ವ ಕ್ರಿಕೆಟ್‌ ಅನ್ನು ಆಳುವ ಮುನ್ಸೂಚನೆ ನೀಡಿದ್ದಾನೆ. ಅದೇ ರೀತಿ ರಿಷಭ್ ಪಂತ್ ನಂ.2 ಆಟಗಾರನೆಂದು ತಿಳಿಸುತ್ತೇನೆ. ನಂತರ ರುತುರಾಜ್ ಗಾಯಕ್ವಾಡ್‌ನನ್ನು ಆರಿಸಿಕೊಳ್ಳುತ್ತೇನೆ. ಈ ಮೂವರು ಬ್ಯಾಟ್ಸ್‌ಮನ್‌ಗಳು ಹೇಗೆ ಆಡುತ್ತಾರೆ ಎಂದು ಎದುರು ನೋಡುತ್ತೇನೆ," ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟರು.

ತಮ್ಮ ಕ್ರಿಕೆಟ್ ವೃತ್ತಿಜೀವನದ ದಿನಗಳಲ್ಲಿ ಯುವ ವೇಗಿಗಳಿಗೆ ಅವಕಾಶ ನೀಡುವುದರಲ್ಲಿ ಹೆಸರುವಾಸಿಯಾಗಿರುವ ಸೌರವ್ ಗಂಗೂಲಿ, ಭಾರತದ ಯುವ ವೇಗಿ ಉಮ್ರಾನ್ ಮಲಿಕ್ ಐಪಿಎಲ್‌ನಲ್ಲಿ ಅಭಿಮಾನಿಗಳಿಂದ ದೊಡ್ಡ ಬೆಂಬಲ ಪಡೆಯಲಿದ್ದಾರೆ ಎಂದು ಹೇಳಿದರು.

"ವೇಗಿ ಉಮ್ರಾನ್ ಮಲಿಕ್ ಬಹುಶಃ ಆಡಲು ಫಿಟ್ ಆಗಿದ್ದರೆ, ಅವರ ನಿಖರ ವೇಗದಿಂದಾಗಿ ಅಭಿಮಾನಿಗಳನ್ನು ಕ್ರಿಕೆಟ್ ಬಗ್ಗೆ ಆಸಕ್ತಿ ವಹಿಸುವುದನ್ನು ಮುಂದುವರಿಸುತ್ತಾರೆ," ಎಂದು ಸೌರವ್ ಗಂಗೂಲಿ ತಿಳಿಸಿದರು.

ಇದೇ ವೇಳೆ ತನ್ನ 5ನೇ ಯುವ ಆಟಗಾರನನ್ನು ಆಯ್ಕೆ ಮಾಡಲು ಯೋಚಿಸಿದ ಸೌರವ್ ಗಂಗೂಲಿ, ಅಂತಿಮವಾಗಿ ಶುಭ್ಮನ್ ಗಿಲ್ ಅವರನ್ನು ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ನೆಚ್ಚಿನ ಐದನೇ ಆಟಗಾರನಾಗಿ ಆಯ್ಕೆ ಮಾಡಿಕೊಂಡರು.

"ಐದನೇ ನೆಚ್ಚಿನ ಆಟಗಾರನನ್ನು ಆಯ್ಕೆ ಮಾಡಲು ನಾನು ಬಹಳ ಯೋಚಿಸಿದೆ. ಆದರೆ, ಶುಭ್ಮನ್ ಗಿಲ್ ಈ ಸ್ಥಾನಕ್ಕೆ ಆರಿಸುತ್ತೇನೆ. ಆದ್ದರಿಂದ, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್ ಅವರು ನನ್ನ ನೆಚ್ಚಿನ ಆಯ್ಕೆ ಪಟ್ಟಿಯಲ್ಲಿ ಪ್ರಮುಖರಾಗಿರುತ್ತಾರೆ. ನಂತರದ ಸ್ಥಾನದಲ್ಲಿ ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ಮತ್ತು ಫಿಟ್ ಆಗಿದ್ದರೆ ಉಮ್ರಾನ್ ಮಲಿಕ್ ಇದ್ದಾರೆ," ಸೌರವ್ ಗಂಗೂಲಿ ತಮ್ಮ ಮಾತುಕತೆಯಲ್ಲಿ ಉಲ್ಲೇಖಿಸಿದ್ದಾರೆ.