ಬ್ರೆಂಡನ್ ಮೆಕಲಮ್ ಹೆಸರಿನಲ್ಲಿರುವ ಈ ವಿಶ್ವದಾಖಲೆಯನ್ನು ಮುರಿಯಬಲ್ಲ ಮೂವರು ಕ್ರಿಕೆಟಿಗರು
ಸದ್ಯ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿರುವ ಬ್ರೆಂಡನ್ ಮೆಕಲಮ್ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 'ಬಾಜ್‌ಬಾಲ್' ಎನ್ನುವ ಹೆಸರು ಬರುವಂತೆ ಮಾಡಿದ್ದೇ ಮೆಕಲಮ್.
ಮೆಕಲಮ್ ತರಬೇತಿಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ.
ಯಾವುದೇ ಮಾದರಿಯಾದರು ಮೆಕಲಮ್ ಮಾತ್ರ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದರು. ಮೆಕಲಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಡಿರುವ ದಾಖಲೆಯನ್ನು ಇದುವರೆಗೂ ಯಾರೂ ಮುರಿಯಲಾಗಿಲ್ಲ. ಹೌದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಶತಕ ಗಳಿಸಿದ ದಾಖಲೆ ಮೆಕಲಮ್ ಹೆಸರಿನಲ್ಲಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 54 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಅವರು ವೇಗದ ಶತಕ ಗಳಿಸಿದ ದಾಖಲೆ ಹೊಂದಿದ್ದಾರೆ. ಈ ದಾಖಲೆಯನ್ನು ಮುರಿಯಬಹುದಾದ ಮೂವರು ಬ್ಯಾಟರ್ ಗಳ ವಿವರ ಇಲ್ಲಿದೆ.
ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್
ಇಂಗ್ಲೆಂಡ್ ತಂಡದ ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಸದ್ಯ ಇಂಗ್ಲೆಂಡ್ ತಂಡದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈ ಯುವ ಆಟಗಾರ 6ನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದು ವಿಶ್ವದ ಗಮನ ಸೆಳೆದಿದ್ದಾರೆ. ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 89.88 ಸರಾಸರಿ ಮತ್ತು 98.377 ಸ್ಟ್ರೈಕ್‌ರೇಟ್‌ನಲ್ಲಿ 809 ರನ್ ಗಳಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಆಡಿದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬ್ರೂಕ್ ಅಬ್ಬರಿಸಿದ್ದರು. ಸತತ ಮೂರು ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿ ದಾಖಲೆ ಬರೆದಿದ್ದರು. ಈಗ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿತ ಎರಡನೇ ಟೆಸ್ಟ್‌ನಲ್ಲಿ 176 ಎಸೆತಗಳ್ಲಲಿ 186 ರನ್ ಗಳಿಸಿದ್ದಾರೆ. ಹ್ಯಾರಿ ಬ್ರೂಕ್ ತಮ್ಮ ಕೋಚ್ ಮೆಕಲಮ್ ದಾಖಲೆಯನ್ನೇ ಮುರಿಯುವ ಸಾಮರ್ಥ್ಯ ಹೊಂದಿರುವ ಆಟಗಾರ.
ರಿಷಬ್ ಪಂತ್‌ಗಿದೆ ಅವಕಾಶ
ಇಂಗ್ಲೆಂಡ್‌ನ ಬಾಜ್‌ಬಾಲ್ ಕ್ರಿಕೆಟ್ ಹುಟ್ಟುವ ಮೊದಲೇ ರಿಷಬ್ ಪಂತ್ ಟೆಸ್ಟ್ ಪಂದ್ಯಗಳಲ್ಲಿ ಟಿ20 ಇನ್ನಿಂಗ್ಸ್ ಆಡಿದ್ದರು. ಅವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾದಲ್ಲಿ ಅಬ್ಬರಿಸಿದ್ದರು. ಸಿಡ್ನಿಯಲ್ಲಿ ಆಡಿದ 97 ರನ್‌ಗಳ ಇನ್ನಿಂಗ್ಸ್ ಪಂತ್ ಎಂತಹ ಬ್ಯಾಟರ್ ಎನ್ನುವುದನ್ನು ಸಾಬೀತು ಮಾಡಿತ್ತು.
ಗಬ್ಬಾದಲ್ಲಿ ರಿಷಬ್ ಪಂತ್ ಆಡಿದ ಇನ್ನಿಂಗ್ಸ್ ವಿಶ್ವ ಟೆಸ್ಟ್ ಕ್ರಿಕೆಟ್‌ನ ಶ್ರೇಷ್ಟ ಇನ್ನಿಂಗ್ಸ್‌ಗಳಲ್ಲಿ ಒಂದೆನಿಸಿಕೊಂಡಿದೆ. ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್ ಪಡೆಯನ್ನು ಸಮರ್ಥವಾಗಿ ಎದುರಿಸಿದ್ದ ಅವರು, ಭಾರತಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದರು.
ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ರಿಷಬ್ ಪಂತ್ ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮೆಕಲಮ್ ವೇಗದ ಶತಕದ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಹೊಂದಿದ್ದಾರೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ
ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದವರು. ಅವರು ಟಿ20 ಕ್ರಿಕೆಟ್‌ನಲ್ಲಿ ಜಂಟಿ ವೇಗದ ಶತಕದ ದಾಖಲೆಯನ್ನು ಹೊಂದಿದ್ದಾರೆ. ತಮ್ಮ ದೊಡ್ಡ ಹೊಡೆತಗಳಿಂದಲೇ ಅವರು ಹಿಟ್‌ಮ್ಯಾನ್ ಎನ್ನುವ ಹೆಸರು ಪಡೆದುಕೊಂಡಿದ್ದಾರೆ.
ಸ್ಪಿನ್ ಆಗಲಿ ವೇಗದ ಬೌಲಿಂಗ್ ಆಗಲಿ ಉತ್ತಮವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಮುನ್ನ ಹಿಟ್‌ಮ್ಯಾನ್ ಮೆಕಲಮ್ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದಾರೆ.