ರೋಹಿತ್ ಶರ್ಮಾ, ಮುಂದಿನ ಟೀಮ್ ಇಂಡಿಯಾದ ಟಿ20 ನಾಯಕ : ಕೋಚ್ ರವಿಶಾಸ್ತ್ರಿ

ದುಬೈನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2021ರಲ್ಲಿ ಭಾರತದ ಅಭಿಯಾನ ಈಗಾಗಲೇ ಅಂತ್ಯಗೊಂಡಿದೆ. ಸೋಮವಾರ (ನ. 08) ನಮೀಬಿಯಾ ವಿರುದ್ಧ ಗೆಲುವಿನ ಮೂಲಕ ಟೀಮ್ ಇಂಡಿಯಾ ತನ್ನ ಓಟವನ್ನು ಅಂತ್ಯಗೊಳಿಸಿದೆ. ಸೆಮಿಫೈನಲ್ ತಲುಪಲಾಗದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ.
ನಮೀಬಿಯಾ ವಿರುದ್ಧದ ಪಂದ್ಯವು ವಿರಾಟ್ ನೇತೃತ್ವದಲ್ಲಿ ಕೊನೆಯ ಟಿ20 ಪಂದ್ಯವಾಗಿತ್ತು. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಮುಂದಿನ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕತ್ವ ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಕೋಚ್ ರವಿಶಾಸ್ತ್ರಿ ಉತ್ತರಿಸಿದ್ದಾರೆ.
ಹೌದು ರವಿಶಾಸ್ತ್ರಿ ನಿನ್ನೆ ನಡೆದ ಪಂದ್ಯದ ಬಳಿಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾನೇ ಮುಂದಿನ ಟೀಮ್ ಇಂಡಿಯಾದ ಟಿ20 ಫಾರ್ಮೆಟ್ ನಾಯಕ ಎಂದು ಖಚಿತಪಡಿಸಿದ್ದಾರೆ. ಜೊತೆಗೆ ರೋಹಿತ್ ಶರ್ಮಾರ ನಾಯಕತ್ವ ಕೌಶಲ್ಯವನ್ನು ಶಾಸ್ತ್ರಿ ಶ್ಲಾಘಿಸಿದ್ದಾರೆ.
" ಬಯೋ ಬಬಲ್ ಮತ್ತು ಹೆಚ್ಚಿನ ಕ್ರಿಕೆಟ್ ಆಡುವ ಪ್ರಮಾಣದಿಂದ ಭಾರತದ ಪ್ರದರ್ಶನವು ಅತ್ಯಂತ ನಿರಾಶದಾಯಕವಲ್ಲ ಎಂದು ನಾನು ಭಾವಿಸುತ್ತೇನೆ. ಆಟಗಾರರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಬದಲಾಗುತ್ತಿರಬೇಕು, ಬೇರೆಯವರಿಗೆ ಜಾಗವನ್ನು ನೀಡಬೇಕು. ಜೊತೆಗೆ ಅವರು ತಮ್ಮ ಕುಟುಂಬಗಳೊಂದಿಗೆ ಸ್ವಲ್ಪ ಸಮಯವನ್ನು ಕಳೆಯಬೇಕು. ನಾನು ಈ ಮೊದಲೇ ಹೇಳಿದಂತೆ ಒಬ್ಬ ವ್ಯಕ್ತಿ ಆರು ತಿಂಗಳಿಂದ ಮನೆಗೆ ಹೋಗದಿದ್ದಾಗ, ಆತನ ಕುಟುಂಬದೊಂದಿಗೆ ಕಾಲವನ್ನು ಕಳೆಯದಿದ್ದಾಗ ಮತ್ತು ಅವರನ್ನು ನೋಡಲು ಅವಕಾಶ ಸಿಗದಿದ್ದರೆ ಅದು ಖಂಡಿತ ಸುಲಭದ ವಿಷಯವಲ್ಲ. ಹೀಗಾಗಿ ಟೀಮ್ ಇಂಡಿಯಾದ ಪ್ರದರ್ಶನವು ಉತ್ತಮವಾಗೇ ಇದೆ ಎಂದು ಭಾವಿಸುತ್ತೇನೆ" ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಮಾತು ಮುಂದುವರಿಸಿದ ಶಾಸ್ತ್ರಿ " ರೋಹಿತ್ ಶರ್ಮಾ ಟೀಮ್ ಇಂಡಿಯಾವನ್ನು ಮುನ್ನೆಡೆಸುವ ಸಮರ್ಥ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಹಲವಾರು ಐಪಿಎಲ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಟೀಮ್ ಇಂಡಿಯಾದ ಉಪನಾಯಕರಾಗಿದ್ದ ರೋಹಿತ್ ಈಗ ನಾಯಕನಾಗಲು ಸಿದ್ಧರಾಗಿದ್ದಾರೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಟಿ20ಯಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿದೆ!
ಟೀಮ್ ಇಂಡಿಯಾ ಯಾವುದೇ ಟಿ20 ಟೂರ್ನಿಗೆ ಹೋಗಲಿ ಬಲಿಷ್ಠ ತಂಡವನ್ನೇ ಹೊಂದಿರುತ್ತದೆ. ನಾವು ವಿಶ್ವಕಪ್ ಗೆಲ್ಲದೇ ಇರಬಹುದು, ಆದ್ರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠ ತಂಡವನ್ನು ಹೊಂದಿರುತ್ತೇವೆ. ಏಕೆಂದರೆ ಐಪಿಎಲ್ ಬಹಳಷ್ಟು ಯುವ ಆಟಗಾರರ ನೀಡುತ್ತಿದೆ. ಹೀಗಾಗಿ ಟೀಮ್ ಇಂಡಿಯಾ ಎಂದಿಗೂ ಬಲಿಷ್ಠವಾಗಿರಲಿದೆ ಎಂದು ಶಾಸ್ತ್ರಿ ಹೇಳಿದರು