ದೇಶದಲ್ಲೇ ಮೊದಲ ಬಾರಿಗೆ ಗೋವುಗಳಿಗಾಗಿ ಆಂಬ್ಯುಲೆನ್ಸ್ ಸೇವೆ ಆರಂಭಿಸಿದ ಮೊದಲ ರಾಜ್ಯ ಇದು!
ಲಖನೌ: ದೇಶದಲ್ಲಿ ಇದೇ ಮೊದಲ ಬಾರಿಗೆ ಗೋವುಗಳ ಚಿಕಿತ್ಸೆಗಾಗಿ ವಿಶೇಷ ಆಂಬ್ಯುಲೆನ್ಸ್ ಸೌಲಭ್ಯವನ್ನು ಉತ್ತರ ಪ್ರದೇಶ ಸರ್ಕಾರ ಜಾರಿಗೆ ತರಲಿದೆ. ಈ ಬಗ್ಗೆ ಘೋಷಣೆ ಮಾಡಿರುವ ಯುಪಿ ಸರ್ಕಾರ ಗಂಭೀರ ಸ್ಥಿತಿಯಲ್ಲಿರುವ ಗೋವಿಗಳ ಚಿಕಿತ್ಸೆಗಾಗಿ ತುರ್ತುಸೇವಾ ನಂಬರ್ 112ಗೆ ಕರೆ ಮಾಡಿದರೆ ಆಂಬ್ಯುಲೆನ್ಸ್ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದೆ.
ಹೊಸ ಆಂಬ್ಯುಲೆನ್ಸ್ ಸೇವೆಗಳು ಮನುಷ್ಯರಿಗೆ ಸಮಾನವಾಗಿ ಗಂಭೀರವಾದ ಅಸ್ವಸ್ಥ ಹಸುಗಳ ಚಿಕಿತ್ಸೆಗೆ ದಾರಿ ಮಾಡಿಕೊಡಲಿದೆ ಎಂದು ಯುಪಿ ರಾಜ್ಯ ಹೈನುಗಾರಿಕೆ ಅಭಿವೃದ್ಧಿ ಮತ್ತು ಪಶುಸಂಗೋಪನೆ ಸಚಿವಾಲಯವು ಹೇಳಿದೆ. ಈ ಯೋಜನೆ ಅಡಿಯಲ್ಲಿ 515 ಆಂಬ್ಯಲೆನ್ಸ್ಗಳು ಸಿದ್ಧವಾಗಿವೆ. ಕರೆ ಮಾಡಿದ 15 ರಿಂದ 20 ನಿಮಿಷಗಳಲ್ಲಿ ಗೋವುಗಳಿಗೆ ಚಿಕಿತ್ಸೆ ದೊರೆಯಲಿದೆ. ಆಂಬ್ಯುಲೆನ್ಸ್ ಜತೆಯಲ್ಲಿ ಓರ್ವ ಪಶುವೈದ್ಯ ಮತ್ತು ಇಬ್ಬರು ಸಹಾಯಕರು ಆಗಮಿಸಿ ಚಿಕಿತ್ಸೆ ನೀಡಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಅವಶ್ಯಕತೆ ಬಿದ್ದರೆ ಗೋವನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯುಲು ಅವಕಾಶವಿದೆ. ಯೋಜನೆಯಡಿ ದೂರುಗಳನ್ನು ಸ್ವೀಕರಿಸಲು ಲಖನೌದಲ್ಲಿ ಕಾಲ್ ಸೆಂಟರ್ ಅನ್ನು ಸ್ಥಾಪಿಸಲಾಗುತ್ತಿದೆ. ಉಚಿತ ಗುಣಮಟ್ಟದ ವೀರ್ಯವನ್ನು ಒದಗಿಸುವ ಮೂಲಕ ಯುಪಿಯಲ್ಲಿ ಹಸುಗಳ ಸಂತಾನೋತ್ಪತ್ತಿಯನ್ನು ಅಭಿವೃದ್ಧಿಪಡಿಸಲಾಗುವುದು. ಮಥುರಾ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಹಸು ಆಂಬ್ಯುಲೆನ್ಸ್ ಯೋಜನೆಯನ್ನು ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.