ಜನಾರ್ದನ ರೆಡ್ಡಿಗೆ ಎಂಟು ವಾರಗಳ ಕಾಲ ಬಳ್ಳಾರಿಗೆ ತೆರಳಲು ಅನುಮತಿ ನೀಡಿದ ಸುಪ್ರೀಂಕೋರ್ಟ್
ಜನಾರ್ದನ ರೆಡ್ಡಿಗೆ ಎಂಟು ವಾರಗಳ ಕಾಲ ಬಳ್ಳಾರಿಗೆ ತೆರಳಲು ಅನುಮತಿ ನೀಡಿದ ಸುಪ್ರೀಂಕೋರ್ಟ್
ನವದೆಹಲಿ: ಕರ್ನಾಟಕದ ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿಗೆ ೮ ವಾರಗಳ ಕಾಲ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
೮ ವಾರಗಳ ಕಾಲ ಬಳ್ಳಾರಿಗೆ ತೆರಳಲು ಅನುಮತಿ ನೀಡುವಂತೆ ಜನಾರ್ಧನ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾ. ವಿನೀತ್ ಸಾರನ್ ನೇತೃತ್ವದ ಪೀಠ, ೮ ವಾರಗಳ ಕಾಲ ಬಳ್ಳಾರಿ ಮತ್ತು ಆಂಧ್ರ ಪ್ರದೇಶಕ್ಕೆ ಹೋಗಲು ಅನುಮತಿ ನೀಡಿದೆ. ಆದರೆ ಬಳ್ಳಾರಿಗೆ ಭೇಟಿ ನೀಡುವಾಗ ಎಸ್.ಪಿ.ಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಈ ಮೂಲಕ ಜನಾರ್ಧನ ರೆಡ್ಡಿ ಅವರ ಜಾಮೀನು ಷರತ್ತುಗಳಲ್ಲಿ ಸಡಿಲಿಕೆ ಮಾಡಿದೆ.
ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರ ಒಂದು ಜಾಮೀನು ಷರತ್ತಿನ ಪ್ರಕಾರ ಅವರು ನ್ಯಾಯಾಲಯದ ಅನುಮತಿಯಿಲ್ಲದೆ ಬಳ್ಳಾರಿಗೆ ಭೇಟಿ ನೀಡಲು ಸಾಧ್ಯವಿಲ್ಲ. ೨೦೦೮ ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ವಿಜಯದ ನಂತರ ರೆಡ್ಡಿ ಕರ್ನಾಟಕದ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.
ಮೂರು ವರ್ಷಗಳ ನಂತರ, ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಿಬಿಐ ಅವರನ್ನು ಬಂಧಿಸಿತು. ಅವರನ್ನು ೨೦೧೫ ರಲ್ಲಿ ಮತ್ತೆ ಬಂಧಿಸಲಾಯಿತು ಮತ್ತು ಜಾಮೀನು ನೀಡಲಾಯಿತು. ರೆಡ್ಡಿಯವರ ಸಂಸ್ಥೆ, ಓಬುಳಾಪುರಂ ಮೈನಿಂಗ್ ಕಂಪನಿ, ಗಣಿ ಗುತ್ತಿಗೆ ಗಡಿ ಗುರುತುಗಳನ್ನು ಬದಲಿಸಿದ ಆರೋಪ ಮತ್ತು ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಆರೋಪವಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವ ವೆಳೆ ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ಭೇಟಿ ನೀಡದಂತೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿತ್ತು.