ಅಪಘಾತದಲ್ಲಿ ಎಸ್ಐ ಪೇದೆ ಸಾವು ಪ್ರಕರಣ ಹುತಾತ್ಮ ಖಾಕಿ ಕುಟುಂಬಕ್ಕಿಲ್ಲ ಬಿಡಿಗಾಸು ಫಲ ಕೊಡದ ಸಿಎಂ ಭರವಸೆ
ಬೆಂಗಳೂರು: ರಾಜಕೀಯ ಪಕ್ಷದ ಅಥವಾ ಸಂಘಟನೆಯೊಂದರಲ್ಲಿ ಮುಖಂಡ, ಕಾರ್ಯಕರ್ತನಾಗಿ ನನ್ನ ಮಗ ಸಾವನ್ನಪ್ಪಿದ್ದರೆ ಇಷ್ಟರಲ್ಲಿ ಪರಿಹಾರ ಸಿಗುತ್ತಿತ್ತು. ಸಬ್ಇನ್ಸ್ಪೆಕ್ಟರ್ ಆಗಿದ್ದರ ಕಾರಣ ಇಂದು ಪುತ್ರನೂ ಇಲ್ಲ. ಪರಿಹಾರವೂ ಇಲ್ಲದಂತೆ ಆಗಿದೆ…
ಇದು 2022ರ ಜೂ.7ರಂದು ಡ್ರಗ್ಸ್ ಪೆಡ್ಲರ್ಗಳ ಬಂಧನ ಕಾರ್ಯಾಚರಣೆ ವೇಳೆ ಆಂಧ್ರಪ್ರದೇಶದ ಚಿತ್ತೂರು ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಿವಾಜಿನಗರ ಠಾಣೆ ಎಸ್ಐ ಅವಿನಾಶ್ ಅವರ ತಂದೆ ಕಾಶಿನಾಥ್ ನೋವಿನ ಮಾತುಗಳು.
40 ವರ್ಷ ಪೊಲೀಸ್ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಕಾಶಿನಾಥ್, ಅನ್ನ ಕೊಟ್ಟ ಇಲಾಖೆ ಮೇಲಿನ ಗೌರವಕ್ಕೆ ತಮ್ಮ ಮಗನಿಗೂ ಸ್ಪೂರ್ತಿ ನೀಡಿ ಎಸ್ಐ ಮಾಡಿಸಿದರು. ತರಬೇತಿ ಮುಗಿಸಿ ಸೇವೆಗೆ ಹಾಜರಾದ ಕೆಲವೇ ತಿಂಗಳಿಗೆ ರಸ್ತೆ ಅಪಘಾತದಲ್ಲಿ ಅವಿನಾಶ್ ಮೃತಪಟ್ಟರು.
ಘಟನೆ ಕುರಿತು ಅಂದು ಮಾತನಾಡಿದ್ದ ಸಿಎಂ ಬೊಮ್ಮಾಯಿ ಮತ್ತು ಗೃಹ ಸಚಿವ ಅರಗ ಜ್ಞಾನೇಂದ್ರ, ಮೃತರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಆದರೆ, 7 ತಿಂಗಳು ಕಳೆದರೂ ಮೃತರ ಕುಟುಂಬಕ್ಕೆ ಬಿಡಿಗಾಸು ಸಿಕ್ಕಿಲ್ಲ. ಪರಿಹಾರ ಕೊಡಿಸುವಲ್ಲಿ ಹಿರಿಯ ಅಧಿಕಾರಿಗಳು ಸಹ ನಿರ್ಲಕ್ಷ್ಯ ವಹಿಸಿರುವುದು ಪೊಲೀಸರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಆರೇಳು ತಿಂಗಳಿಂದ ಎಲ್ಲ ಕಚೇರಿಗಳಿಗೆ ಸುತ್ತಾಡಿ ಅವರು ಕೇಳಿದ ದಾಖಲೆ ಪತ್ರ ಒದಗಿಸಿದೆ. ಇಂದಿಗೂ ಪರಿಹಾರ ಕೊಡುವ ಭರವಸೆಗಳು ಮಾತ್ರ ದೊರೆತಿವೆ. ಪರಿಹಾರ ಮಾತ್ರ ಲಭಿಸಿಲ್ಲ ಎಂದು ಕಾಶಿನಾಥ್, 'ವಿಜಯವಾಣಿ' ಜತೆಗೆ ಅಳಲು ತೋಡಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ವೇತನದಲ್ಲಿ ಕಡಿತ ಮಾಡಿ 20 ಲಕ್ಷ ರೂ. ವಿಮಾ ಪಾಲಿಸಿ ಮಾಡಿಸಲಾಗಿದೆ. ಮುಷ್ಕರ, ಪ್ರತಿಭಟನೆ, ಕೋಮು ಗಲಭೆ, ಕರ್ಫ್ಯೂ, ಬಾಂಬ್ ಸ್ಫೋಟ ಮತ್ತು ಅಪರಾಧ ಪ್ರಕರಣಗಳ ತಡೆಗಟ್ಟುವ ಸಮಯದಲ್ಲಿ ಹುತಾತ್ಮರಾದವರಿಗೆ 'ಅನುಗ್ರಹ ಪೂರ್ವಕ ಪರಿಹಾರ' ಎಂದು 30 ಲಕ್ಷ ರೂ. ನೀಡುವುದಾಗಿ 2018ರ ಅಕ್ಟೋಬರ್ನಲ್ಲಿ ಸರ್ಕಾರ ಆದೇಶಿಸಿದೆ. ಆದರೆ, ಅವಿನಾಶ್ ಮತ್ತು ಅನಿಲ್ ಮುಲಿಕ್ಗೆ ನಯಾಪೈಸೆ ಸಿಕ್ಕಿಲ್ಲ.
ಇದೊಂದು ರಸ್ತೆ ಅಪಘಾತ. ಇದರಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ರಾಜ್ಯ ಪೊಲೀಸ್ ಇಲಾಖೆ ಮತ್ತು ಗೃಹ ಇಲಾಖೆ ಅಧಿಕಾರಿಗಳು ಅಸಡ್ಡೆ ಮಾಡುತ್ತಿರುವುದು ಕಂಡುಬಂದಿದೆ. ಕುಟುಂಬಕ್ಕೆ ಆಧಾರವಾಗಿದ್ದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಬೀದಿಗೆ ಬಂದಿದ್ದಾರೆ.
ಸರ್ಕಾರದ ಪ್ರಕಾರ ಡ್ರಗ್ಸ್ ದಂಧೆ ಅಪರಾಧ ಅಲ್ಲವೇ? ಅಪರಾಧ ತಡೆಗಟ್ಟುವ ಕರ್ತವ್ಯ ಅಂದರೆ ಖಾಕಿ ಇದ್ದಲ್ಲಿಯೇ ಅಪರಾಧ ನಡೆಯಬೇಕೆ ಅಥವಾ ಆರೋಪಿಗಳು ಖಾಕಿ ಇದ್ದಲ್ಲಿಗೇ ಬರಬೇಕೆ ಎಂದು ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಅಂದರೆ ಮುಷ್ಕರ, ಪ್ರತಿಭಟನೆ, ಮೆರವಣಿಗೆ, ಗುಂಪು ಗಲಾಟೆ, ದೊಂಬಿ, ಕಲ್ಲು ತೂರಾಟ, ಕೋಮು ಗಲಭೆ, ಕರ್ಫ್ಯೂ, ನಿಷೇದಾಜ್ಞೆ, ಪ್ರಕೃತಿ ವಿಕೋಪ, ಬಾಂಬ್ ಪತ್ತೆ, ನಿಷ್ಕಿರು, ನಕ್ಸಲ್, ಉಗ್ರ ವಿರುದ್ಧ ಕಾರ್ಯಾಚರಣೆ, ಬೆಂಕಿ
ಅನಾಹುತ ಎಂದು ಉಲ್ಲೇಖಿಸಲಾಗಿದೆ. ಅಪರಾಧ ತಡೆಗಟ್ಟುವ ಕರ್ತವ್ಯ ಅಂದರೆ ಕಳ್ಳತನ, ಕೊಲೆ, ಅಪಹರಣ, ದರೋಡೆ ತಡೆಗಟ್ಟುವ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಆರೋಪಿಗಳ ಘರ್ಷಣೆಯಲ್ಲಿ ಗಾಯ ಮತ್ತು ಮರಣ ಹೊಂದರೆ ಅನುಗ್ರಹ ಪೂರ್ವ ಪರಿಹಾರ ಸಿಗಲಿದೆ ಎಂದು 2018ರ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇದೀಗ ಸುತ್ತೋಲೆಗೆ ತಿದ್ದುಪಡಿ ತರಬೇಕಾಗಿದೆ. ಅಪರಾಧಗಳನ್ನು ತಡೆಗಟ್ಟಲು ಅಥವಾ ಆರೋಪಿಗಳ ಪತ್ತೆಗೆ ಹೋಗುವಾಗ ಆಕಸ್ಮಿಕವಾಗಿ ಸಾವನ್ನ ಪ್ಪಿದರೆ ಅಂತಹ ರಸ್ತೆ ಅಪಘಾತದಲ್ಲಿ ಮೃತಪಟ್ಟರೆ ಅಂತಹ ಪ್ರಕರಣಗಳನ್ನು ಪರಿಗಣಿಸುವಂತೆ ತಿದ್ದುಪಡಿ ತರಬೇಕಾಗಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಪಿಎಸ್ಐ ಅವಿನಾಶ್ ಮತ್ತು ಕಾನ್ಸ್ಟೆಬಲ್ ಅನಿಲ್ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯ ತೋರಿಸುವ ಇಲಾಖೆ ವಿರುದ್ಧ ಪತ್ರ ಚಳವಳಿ ನಡೆಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ, ಸುಪ್ರೀಂ ಕೋರ್ಟ್ ಸಿಜೆಐ ಮತ್ತು ಹೈಕೋರ್ಟ್ ಸಿಜೆ ಅವರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.