27 ರೈಲುಗಳ ಸೇವೆಯಲ್ಲಿ ವ್ಯತ್ಯಯ

27 ರೈಲುಗಳ ಸೇವೆಯಲ್ಲಿ ವ್ಯತ್ಯಯ

ಬೆಂಗಳೂರು: ನಗರದ ಹೃದಯಭಾಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಶುಕ್ರವಾರ ಪ್ರಧಾನಿ ಮೋದಿ ಅವರು “ವಂದೇ ಭಾರತ್‌’ ಹಾಗೂ “ಕಾಶಿ ದರ್ಶನ’ಕ್ಕೆ ಚಾಲನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಕಾರ್ಯಾಚರಣೆ ಮಾಡುವ ಸುಮಾರು 27 ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸುರಕ್ಷತೆ ದೃಷ್ಟಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣಕ್ಕೆ ಆಗಮಿಸುವ ರೈಲುಗಳ ಪೈಕಿ ಕೆಲವನ್ನು ರದ್ದುಗೊಳಿಸಲಾಗಿದೆ. ಹಲವು ರೈಲುಗಳ ಮಾರ್ಗ ಬದಲಾವಣೆ ಮತ್ತು ಭಾಗಶಃ ರದ್ದುಗೊಳಿಸಲಾಗಿದೆ. ಪ್ರಧಾನಿಗಳು ರೈಲಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮ ಕೆಎಸ್‌ಆರ್‌ನ 8ನೇ ಪ್ಲಾಟ್‌ಫಾರಂನಲ್ಲಿ ಆಯೋಜನೆಗೊಂಡಿದೆ. ಕೆಲವು ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಅದರ ಆಸುಪಾಸಿನ ಪ್ಲಾಟ್‌ಫಾರಂಗೆ ಬರುವ ರೈಲುಗಳ ಆಗಮನ- ನಿರ್ಗಮನಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ವ್ಯತ್ಯಯ ಆಗಲಿರುವ ಕೆಎಸ್‌ಆರ್‌ಗೆ ಬರುವ ಮತ್ತು ಹೋಗುವ ರೈಲುಗಳ ವಿವರ ಹೀಗಿದೆ.

ಕೆಎಸ್‌ಆರ್‌- ಚನ್ನಪಟ್ಟಣ (ರೈಲು ಸಂಖ್ಯೆ 06581) ಮತ್ತು ಚನ್ನಪಟ್ಟಣ- ಕೆಎಸ್‌ಆರ್‌ (06582) ರದ್ದುಗೊಳಿಸಲಾಗಿದೆ. ಇನ್ನು ಅರಸೀಕೆರೆ- ಕೆಎಸ್‌ಆರ್‌ (06274), ಕೋಲಾರ- ಕೆಎಸ್‌ಆರ್‌ (16550), ಹಿಂದುಪುರ- ಕೆಎಸ್‌ಆರ್‌ (06266) ಯಶವಂತಪುರದಲ್ಲೇ ನಿಲುಗಡೆ ಆಗಲಿವೆ. ಅದೇ ರೀತಿ, ಮೈಸೂರು- ಕೆಎಸ್‌ಆರ್‌ (06256) ನಾಯಂಡಹಳ್ಳಿಯಲ್ಲೇ ನಿಲುಡೆ ಆಗಲಿದೆ. ಮಾರಿಕುಪ್ಪಂ- ಕೆಎಸ್‌ಆರ್‌ (06264) ರೈಲಿಗೆ ಕಂಟೋನ್ಮೆಂಟ್‌ ಕೊನೆಯ ನಿಲುಗಡೆ ಆಗಲಿದೆ. ಇನ್ನು ಕೆಎಸ್‌ಆರ್‌- ತುಮಕೂರು (06571) ಮತ್ತು ಕೆಎಸ್‌ಆರ್‌- ಹಾಸನ (06583) ರೈಲುಗಳು ನಗರದ ಹೃದಯಭಾಗದಿಂದ ನಿರ್ಗಮಿಸುವ ಬದಲಿಗೆ ಯಶವಂತಪುರದಿಂದ ಹೊರಡಲಿವೆ. ಕೆಎಸ್‌ಆರ್‌- ವೈಟ್‌ಫೀಲ್ಡ್‌ (01765) ರೈಲು ಕಂಟೋನ್ಮೆಂಟ್‌ನಿಂದ ಮತ್ತು ಕೆಎಸ್‌ಆರ್‌- ಮೈಸೂರು (06257) ನಾಯಂಡಹಳ್ಳಿಯಿಂದ ಹೊರಡಲಿದೆ. ಕುಪ್ಪಂ- ಕೆಎಸ್‌ಆರ್‌ (06292) ರೈಲು ಕಂಟೋನ್ಮೆಂಟ್‌ ನಿಲ್ದಾಣಕ್ಕೇ ಕೊನೆಗೊಳ್ಳಲಿದೆ.

ಇನ್ನು ಮೈಸೂರು- ಬೆಳಗಾವಿ (17326) ರೈಲು ಮೈಸೂರು- ಹಾಸನ- ಅರಸೀಕೆರೆ ಮೂಲಕ ಸಾಗಲಿದ್ದು, ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ, ಕೆಎಸ್‌ಆರ್‌, ಯಶವಂತಪುರ, ತುಮಕೂರು, ತಿಪಟೂರು ನಿಲ್ದಾಣಗಳಲ್ಲಿ ಇದು ನಿಲುಗಡೆ ಆಗದು. ಶಿವಮೊಗ್ಗ- ಕೆಎಸ್‌ಆರ್‌ (12090), ಮೈಸೂರು- ಕೆಎಸ್‌ಆರ್‌ (16215), ಚೆನ್ನೈ- ಮೈಸೂರು (12007) ರೈಲುಗಳು ಕ್ರಮವಾಗಿ ಸುಮಾರು 60 ನಿಮಿಷ ತಡವಾಗಿ ಹೊರಡಲಿವೆ. ಕೆಎಸ್‌ಆರ್‌- ಮೈಸೂರು (16558) 90 ನಿಮಿಷ ತಡವಾಗಿ ನಿರ್ಗಮನ ಆಗಲಿದೆ. ಅದೇ ರೀತಿ, ಕುಚುವೇಲಿ- ಮೈಸೂರು (16316) ಮೂರು ತಾಸು, ಮೈಸೂರು- ಬೆಳಗಾವಿ (17326) 1.40 ತಾಸು, ಸೊಲ್ಲಾಪುರ- ಮೈಸೂರು (16536) ಮತ್ತು ಬಾಗಲಕೋಟೆ- ಮೈಸೂರು (17308) ಕ್ರಮವಾಗಿ ಎರಡು ತಾಸು ತಡವಾಗಿ ಹೊರಡಲಿವೆ.

ವೈಟ್‌ಫೀಲ್ಡ್‌- ಕೆಎಸ್‌ಆರ್‌ (01766) ಮಾರ್ಗದುದ್ದಕ್ಕೂ ಅಲ್ಲಿ 50 ನಿಮಿಷ ನಿಲುಗಡೆ ಆಗಲಿದೆ. ಅದೇ ರೀತಿ, ಮಾರಿಕುಪ್ಪಂ- ಕೆಎಸ್‌ಆರ್‌ (01776) 75 ನಿಮಿಷ, ಮೈಸೂರು- ಕೆಎಸ್‌ಆರ್‌ (16215) ಮತ್ತು ಮೈಸೂರು- ಕೆಎಸ್‌ಆರ್‌ (16023) ಒಂದೂವರೆ ತಾಸು ಹಾಗೂ ಶಿವಮೊಗ್ಗ- ಕೆಎಸ್‌ಆರ್‌ (12090) ಒಂದು ತಾಸು ಅಲ್ಲಲ್ಲಿ ನಿಲುಡೆಗೆ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪರ್ಯಾಯ ಮಾರ್ಗ ಸೂಚಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಗಣ್ಯರ ಆಗಮನ-ನಿರ್ಗಮನದ ಕಾರಣದಿಂದ ಬೆಂಗಳೂರು ನಗರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಾರಿ ಸಂಚಾರದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಗರದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರವರಗೆ ಹಾಗೂ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಟೋಲ್‌ ರಸ್ತೆ ಬದಲಿಗೆ ಮೈಲನಹಳ್ಳಿ-ಬೇಗೂರು ರಸ್ತೆ ಮೂಲಕ ಸಂಚರಿಸುವಂತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌) ಪ್ರಕಟಣೆ ತಿಳಿಸಿದೆ.