ಐದು ಕ್ಷೇತ್ರಗಳಿಗೆ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ದಿಂದ ಅಭ್ಯರ್ಥಿ ಘೋಷಿಸಿದ ಜನಾರ್ಧನ ರೆಡ್ಡಿ

ಕೊಪ್ಪಳ: ಮುಂಬರುವಂತ ವಿಧಾನಸಭಾ ಚುನಾವಣೆಗಾಗಿ ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದಾವೆ. ಈ ನಡುವೆ ಹೊಸ ಪಕ್ಷ ಕಟ್ಟಿದ್ದಂತ ಮಾಜಿ ಸಚಿವ ಜನಾರ್ಧನ ರೆಡ್ಡಿ, ಇಂದು ಐದು ಕ್ಷೇತ್ರಗಳಿಗೆ ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.
ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸಿರಗುಪ್ಪ, ಕನಕಗಿರಿ, ಸಿಂಧನೂರು, ನಾರಠಾಣ ಹಾಗೂ ಹಿರಿಯೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸುತ್ತಿರುವುದಾಗಿ ಹೇಳಿದರು.
ಕೊಪ್ಪಳ ಜಿಲ್ಲೆಯ ಎಸ್ಸಿ ಮೀಸಲು ಕ್ಷೇತ್ರ ಕನಕಗಿರಿಗೆ ಡಾ.ಚಾರುಲ್ ದಾಸರಿ ಅವರಿಗೆ ಟಿಕೆಟ್ ನೀಡಿದ್ದರೇ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಕ್ಷೇತ್ರಕ್ಕೆ ಧರೆಪ್ಪ ನಾಯಕ, ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರಕ್ಕೆ ನೆಕ್ಕಂಟಿ ಮಲ್ಲಿಕಾರ್ಜುನ, ವಿಜಯಪುರ ಜಿಲ್ಲೆಯ ನಾಗಠಾಣ ಕ್ಷೇತ್ರಕ್ಕೆ ಶ್ರೀಕಾಂತ್ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರಕ್ಕೆ ಮಹೇಶ್ ಅವರಿಗೆ ಟಿಕೆಟ್ ನೀಡುತ್ತಿರುವುದಾಗಿ ಹೇಳಿದರು.
ಈ ಐದು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇದನ್ನು ಹಾಗೇ ಹೇಳುತ್ತಿಲ್ಲ, ಸರ್ವೇ ಮಾಡಿಸಿ, ಇವರು ಗೆಲ್ಲಲಿದ್ದಾರೆ ಎಂಬ ಮಾಹಿತಿ ಆಧರಿಸಿಯೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿರೋದಾಗಿ ತಿಳಿಸಿದರು.