ಬನಾರಸ್ ಸೀರೆಯಲ್ಲಿ ಕಂಗೊಳಿಸಲಿದೆ ಕರ್ನಾಟಕದ ರೇಷ್ಮೆ
ವಾರಣಾಸಿಗೂ ಕರ್ನಾಟಕ ನಡುವಿನ ರೇಷ್ಮೆ ಬಾಂಧವ್ಯಕ್ಕೆ ಮತ್ತೆ ಮರುಜೀವ ಸಿಕ್ಕಿದ್ದು, ಬನಾರಸ್ ಸೀರೆಯಲ್ಲಿ ಕರ್ನಾಟಕದ ರೇಷ್ಮೆ ಕಂಗೊಳಿಸಲಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ. ವಾರಣಾಸಿಯ ಬನಾರಸ್ ವಿಶ್ವವಿದ್ಯಾಲಯದಲ್ಲಿ ಇಂದು ಉತ್ತರ ಪ್ರದೇಶದ ರೇಷ್ಮೆ ಇಲಾಖೆ, ಟೆಕ್ಸ್ಟೈಲ್ ಇಲಾಖೆ ಅಧಿಕಾರಿಗಳು, ರೀಲರ್ಸ್ಗಳ ಜೊತೆ ಸಚಿವ ಡಾ.ನಾರಾಯಣಗೌಡ ಸಭೆ ನಡೆಸಿದರು. ಕರ್ನಾಟಕ ರೇಷ್ಮೆ ಗುಣಮಟ್ಟ, ಪೂರೈಕೆ ಹಾಗೂ ರೇಷ್ಮೆ ಮಾರಾಟಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವಾರಣಾಸಿಯಲ್ಲಿ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದೆ. ಸದ್ಯ ಚೀನಾದಿಂದ ರೇಷ್ಮೆ ಆಮದು ಸ್ಥಗಿತಗೊಳಿಸಲಾಗಿದೆ. ಕರ್ನಾಟಕವು ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಹೆಚ್ಚಿನ ಸ್ವಯಂ ಚಾಲಿತ ರೀಲಿಂಗ್ ಯಂತ್ರ (ಎಂಆರ್ಎಂ) ಗಳನ್ನು ಹೊಂದಿದ್ದು ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಗುಣಮಟ್ಟದ ಬೈವೊಲ್ಟಿನ್ ದಾರವನ್ನು ಉತ್ಪಾದಿಸುತ್ತಿದೆ. ಇದು ಚೀನಾ ರೇಷ್ಮೆಗಿಂತಲೂ ಉತ್ತಮವಾಗಿದೆ ಎಂದು ಸಚಿವರು ತಿಳಿಸಿದರು. ಸಭೆಯಲ್ಲಿ ಕೆಎಸ್ಎಂಬಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ರೇಷ್ಮೆ ಇಲಾಖೆ ಆಯುಕ್ತ ಪೆದ್ದಪ್ಪಯ್ಯ, ಕೆಎಸ್ಎಂಬಿ ಎಂಡಿ ಅನುರಾಧ, ಉತ್ತರ ಪ್ರದೇಶ ಸರ್ಕಾರದ ರೇಷ್ಮೆ ಇಲಾಖೆ ನರೇಂದ್ರ ಸಿಂಗ್ ಪಟೇಲ್, IIHT ನಿರ್ದೇಶಕ ಥೆನ್ನಾ ರೆಶ್ಯೂ, ವಾರಣಾಸಿ ಡಿಸಿ (ಕೈಗಾರಿಕೆ) - ವೀರೇಂದ್ರ ಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.