ಮಾವನ ಪಿಎಫ್ ಹಣದ ಆಸೆಗೆಎ ಪತ್ನಿಯನ್ನೇ ಕೊಂದ ಪಾಪಿ

ಮಾವನ ಪಿಎಫ್ ಹಣದ ಆಸೆಗೆಎ ಪತ್ನಿಯನ್ನೇ ಕೊಂದ ಪಾಪಿ

ರಾಯಚೂರು : ಹಣಕ್ಕಾಗಿ ಜನರು ಏನೆಲ್ಲ ಕೆಲಸ ಮಾಡುತ್ತಾರೆ ಎಂಬುದನ್ನೇ ಊಹಿಸಲಾಗದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಇಲ್ಲೊಂದು ಉದಾಹರಣೆ ಇದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.

ಮಾವನ ಹಣಕ್ಕಾಗಿ ಇಲ್ಲೊಬ್ಬ ಪಾಪಿ ಪತ್ನಿಯನ್ನೇ ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿಯ ಖಿಲ್ಲಾ ನಗರದ ಮೊಹಮ್ಮದ್ ಫಜಲುದ್ದಿನ್ ಎಂಬ ಪಾಪಿಯೇ ಹಣಕ್ಕಾಗಿ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಆರೋಪಿ. ಈತ ಚಹಾಪುಡಿ ಮಾರುತ್ತ ಬದುಕು ಸಾಗಿಸುತ್ತಿದ್ದ. ಕಳೆದ 8 ವರ್ಷಗಳ ಹಿಂದೆ ಸುಲ್ತಾನ್ ಪುರದ ಆಸ್ಮಾಬಾನು ಎಂಬುವವರೊಂದಿಗೆ ವಿವಾಹವಾಗಿದ್ದ. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ, ಇತ್ತೀಚೆಗೆ ಈ ವ್ಯಕ್ತಿಗೆ ಹಣದ ದಾಹ ಹೆಚ್ಚಾಗಿದೆ.

ಏಕೆಂದರೆ ಪತ್ನಿಯ ತಂದೆ ಸಾರಿಗೆ ನೌಕರಿಯಿಂದ ನಿವೃತ್ತಿ ಹೊಂದಿದ್ದರು. ಅವರಿಗೆ ಬಂದಿದ್ದ ಭವಿಷ್ಯ ನಿಧಿಯ ಮೇಲೆ ಈತನ ಕಣ್ಣು ಬಿದ್ದಿತ್ತು. ಆ ಹಣದಲ್ಲಿ ನಿನ್ನ ಪಾಲು ಕೇಳಿ ತರುವಂತೆ ಇತ್ತೀಚೆಗೆ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಆದರೆ, ಪತ್ನಿ ಮಾತ್ರ ಇದಕ್ಕೆ ಒಪ್ಪಿಲ್ಲ. ಇದರಿಂದ ಕೋಪಗೊಂಡ ಪಾಪಿ, ಪತ್ನಿಯನ್ನೇ ಕೊಲೆ ಮಾಡಿದ್ದಾನೆ.

ಆಸ್ಮಾ ಸಾವನ್ನಪ್ಪುತ್ತಿದ್ದಂತೆ ತಲೆ ತಿರುಗಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರ ಎದುರು ನಾಟಕವಾಡಿದ್ದಾನೆ. ಆದರೆ, ಆಸ್ಮಾಳ ಕುತ್ತಿಗೆ ಭಾಗದಲ್ಲಿ ಗಾಯ ಇರುವುದನ್ನು ಗಮನಿಸಿದ ಪೊಲೀಸರು, ವಿಚಾರಣೆಗೆ ಒಳಪಡಿಸಿದಾಗ ಹಗ್ಗದಿಂದ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಪಾಪಿಯ ಹಣದ ದಾಹಕ್ಕೆ ಇಬ್ಬರು ಮಕ್ಕಳು ತಬ್ಬಲಿಯಾಗುವಂತಾಗಿದೆ. ಈ ಕುರಿತು ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.