ರಾಯಚೂರು: ಪೂರ್ಣಪ್ರಮಾಣದ ಏಮ್ಸ್‌ ಕೊಡದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟ

ರಾಯಚೂರು: ಪೂರ್ಣಪ್ರಮಾಣದ ಏಮ್ಸ್‌ ಕೊಡದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟ

ರಾಯಚೂರು: 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿರುವ ಏಮ್ಸ್‌ ಮಾದರಿ ಆಸ್ಪತ್ರೆ ಸ್ಥಾಪನೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.

ಪೂರ್ಣ ಪ್ರಮಾಣದಲ್ಲಿ ಏಮ್ಸ್‌ ರಾಯಚೂರಿನಲ್ಲಿ ಸ್ಥಾಪಿಸುವ ಪ್ರಸ್ತಾವನೆ ಕಳುಹಿಸುವ ಬಗ್ಗೆ ಇನ್ನು 10 ದಿನಗಳಲ್ಲಿ ಘೋಷಣೆ ಮಾಡದಿದ್ದರೆ, ಪ್ರತ್ಯೇಕ ರಾಜ್ಯ ಹೋರಾಟ ಆರಂಭಿಸಲಾಗುವುದು' ಎಂದು ರಾಯಚೂರು ಜಿಲ್ಲಾ ಏಮ್ಸ್‌ ಹೋರಾಟ ಸಮಿತಿ ಪದಾಧಿಕಾರಿಗಳು ಘೋಷಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಡಾ.ಬಸವರಾಜ ಕಳಸ ಹಾಗೂ ಹೋರಾಟಗಾರ ಎಂ.ಆರ್‌.ಭೇರಿ ಅವರು, 'ನುಡಿದಂತೆ ನಡೆ ಎಂದು ಬಸವಣ್ಣನವರು ಹೇಳಿದ ಮಾತನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲನೆ ಮಾಡುವುದಾದರೆ, ತಾವೇ ಎರಡು ಸಲ ರಾಯಚೂರಿಗೆ ಭೇಟಿ ನೀಡಿದಾಗ ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕು. 10 ದಿನಗಳಲ್ಲಿ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸುವ ಬಗ್ಗೆ ಹೇಳದಿದ್ದರೆ ಅಮರಣಾಂತ ಉಪವಾಸ ಆರಂಭವಾಗಲಿದೆ. ಸಾಯುವುದಕ್ಕೂ ಹಿಂಜರಿಕೆಯಿಲ್ಲ. ಪೂರ್ಣ ಪ್ರಮಾಣದ ಏಮ್ಸ್‌ ಬಿಟ್ಟರೆ, ಬೇರೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ' ಎಂದರು.

'ರಾಜಕೀಯ ಶಕ್ತಿ ಕೇಂದ್ರವಾಗಿ ಬೆಳೆದಿರುವ ಧಾರವಾಡ ಭಾಗದ ರಾಜಕಾರಣಿಗಳ ಒತ್ತಡ ಹಾಗೂ ರಾಯಚೂರು ಜಿಲ್ಲೆಯಲ್ಲಿ ನಿರ್ವೀರ್ಯ ಶಾಸಕರು ಇರುವುದರ ಫಲವಾಗಿ ಜನರು ಸಂಕಷ್ಟ ಅನುಭವಿಸುವ ಸ್ಥಿತಿ ಒದಗಿದೆ. ಅಪೌಷ್ಟಿಕತೆ, ಹಿಂದುಳಿದಿರುವಿಕೆ, ತಾಯಿ-ಶಿಶು ಮರಣ ಪ್ರಮಾಣ ಹೆಚ್ಚಳ, ಅನಾರೋಗ್ಯ ಎದುರಿಸುತ್ತಿರುವ ಜಿಲ್ಲೆ ಎನ್ನುವ ಮಾನದಂಡಗಳನ್ನು ಆಧರಿಸಿ ರಾಯಚೂರಿನಲ್ಲಿಯೇ ಏಮ್ಸ್‌ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದ ಮಾತು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆಯು ವಿವಿಧ ಆಯಾಮಗಳಲ್ಲಿ ಮುಂದುವರಿಯುತ್ತದೆ. ಈಗಾಗಲೇ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿ 281 ದಿನಗಳಾಗಿವೆ' ಎಂದು ತಿಳಿಸಿದರು.