ವೈಜ್ಞಾನಿಕ ಕಸ ವಿಲೇವಾರಿ ಅತ್ಯಗತ್ಯ | ಸ್ವಚ್ಚತೆ ಕಾಪಾಡದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ.

ವೈಜ್ಞಾನಿಕ ಕಸ ವಿಲೇವಾರಿ ಅತ್ಯಗತ್ಯ.
ಸ್ವಚ್ಚತೆ ಕಾಪಾಡದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ.
ದೊಡ್ಡಬಳ್ಳಾಪುರ: ಗ್ರಾಪಂ ಪ್ರದೇಶಗಳನ್ನು ಕಸಮುಕ್ತ ಮತ್ತು ವೈಜ್ಞಾನಿಕ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ. ಘನತ್ಯಾಜ್ಯ ವಾಹನಗಳು ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು. ಜನರಿಗೆ ಹಸಿ ಮತ್ತು ಒಣ ಕಸ ವಿಂಗಡಿಸಿ ಸಂಗ್ರಹಿಸಿ ವಾಹನಕ್ಕೆ ಹಾಕುವುದಕ್ಕಾಗಿ ಸ್ವಚ್ಛ ಭಾರತ ಮಿಶನ್ ಮುಖಾಂತರವೇ ಎರಡು ಡಬ್ಬಿಗಳನ್ನು ನೀಡಲಾಗುತ್ತಿದೆ ಎಂದು ಹೊನ್ನಾವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಧು ಜಿ.ಆರ್ ರುದ್ರೇಶ್ ಹೇಳಿದರು. ತಾಲ್ಲೂಕಿನ ಹೊನ್ನಾವರ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛ ವಾಹಿನಿ ಹಾಗೂ ಪ್ರತಿ ಮನೆಯಲ್ಲಿ ಕಸ ವಿಂಗಡಣೆಗೆ ಕಸದ ಡಬ್ಬಿಗಳ ವಿತರಣೆ ಮಾಡಿ ಅವರು ಮಾತನಾಡಿದರು.
ಸ್ವಚ್ಛ ಭಾರತ್ ಯೋಜನೆಯಡಿ ಜಿಲ್ಲಾ ಪಂಚಾಯತಿ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ವ್ಯವಸ್ಥೆಯು ಮಾನವನ ಮೂಲಭೂತ ಹಕ್ಕಾಗಿದ್ದು, ಉತ್ತಮ ಆರೋಗ್ಯ ಹೊಂದಿ ಗೌರವಯುತ ಜೀವನ ನಡೆಸಲು ಅಗತ್ಯವಾಗಿದೆ. ನೈರ್ಮಲ್ಯ ವ್ಯವಸ್ಥೆಯು ಸುವ್ಯವಸ್ಥಿತವಾಗಿರದೆ. ಅಸುರಕ್ಷತೆಯಿಂದ ಕೂಡಿದ್ದರೆ, ಅದು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ.
ಈ ಹಿನ್ನೆಲೆಯಲ್ಲಿ ಸ್ವಚ್ಛ ಸುಂದರ ಕರ್ನಾಟಕವನ್ನಾಗಿಸುವ ವಿಶಾಲ ದೃಷ್ಟಿಕೋನವನ್ನು ಸಾಧಿಸಲು ಎಲ್ಲಾ ಗ್ರಾಮೀಣ ಕುಟುಂಬಗಳಲ್ಲಿ ಘನ ತ್ಯಾಜ್ಯವನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯತೆಯಿದೆ. ಆದ್ದರಿಂದ ಗ್ರಾಮಗಳಲ್ಲಿ ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಕಲ್ಪಿಸಿದರೆ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಸ್ವಚ್ಛ-ಸ್ವಸ್ಥ ಗ್ರಾಮಗಳನ್ನು ರೂಪಿಸಿ ಸದೃಢ ಸಮಾಜ ರೂಪಿಸಬಹುದಾಗಿದೆ ಎಂದರು. ಗ್ರಾಮದ ಹಿರಿಯ ಮುಖಂಡ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಬಿ.ವಿ ಸದಾಶಿವ ಮಾತನಾಡಿ ಪ್ರತಿಯೊಬ್ಬರು ಮನೆಯ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಶುಚಿತ್ವ ಕಾಪಾಡದಿದ್ದರೆ ಕಾಯಿಲೆಗಳನ್ನು ನಾವೇ ಆಹ್ವಾನಿಸಿದಂತೆ. ವೈಜ್ಞಾನಿಕವಾಗಿ ಕಸ ನಿರ್ವಹಣೆ ಅತ್ಯಗತ್ಯವಾಗಿದೆ ಎಂದರು‌.
SHOW LESS