ಕೃಷಿಯಲ್ಲಿ ಡಿಜಿಟಲ್ ಕ್ರಾಂತಿ, ಪಿಎಂ ಕಿಸಾನ್ ಯೋಜನೆಯಡಿ 2.2 ಲಕ್ಷ ಕೋಟಿ ಹಣ ವರ್ಗಾವಣೆ

ನವದೆಹಲಿ, ಫೆಬ್ರುವರಿ 01: ಕೃಷಿ ವಲಯದಲ್ಲಿ ಡಿಜಿಟಲ್ ಪಾವತಿಯ ಪ್ರಗತಿ ಏರಿಕೆಯಾಗಿದೆ. ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan)ಯಡಿ 2.2 ಲಕ್ಷ ಕೋಟಿ ನಗದು ವರ್ಗಾವಣೆ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಬುಧವಾರ (ಫೆ.1) ಕೇಂದ್ರ ಆಯವ್ಯಯ 2023 (Union Budget 2023-24) ಘೋಷಣೆ ವೇಳೆ ಈ ಬಗ್ಗೆ ಕುರಿತು ಮಾಹಿತಿ ನೀಡಿದ ಅವರು, 2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇದಕ್ಕು ಮುನ್ನವೇ 2014ರಿಂದ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಗೆ ಕೇಂದ್ರ ಬಜೆಟ್ ಪ್ರಸ್ತುತಪಡಿಸಿದೆ. ದೇಶದಲ್ಲಿ ಜ್ಞಾನ ಸಹಿತ ಆರ್ಥಿಕತೆ ಸಾಧಿಸುವುದು ಬಿಜೆಪಿ ಸರ್ಕಾರದ ಧ್ಯೇಯವಾಗಿದೆ ಎಂದು ಅವರು ಹೇಳಿದರು.
ಕೃಷಿ ಸೇರಿದಂತೆ ದೇಶದ ಎಲ್ಲ ವಲಯಗಳಲ್ಲಿ ಡಿಜಿಟಲ್ ಪಾವತಿಗಳಲ್ಲಿ ಗಮನಾರ್ಹ ಬೆಳವಣಿಗೆ ಆಗಿದೆ. ಭಾರತದ ಆರ್ಥಿಕತೆಯು ಹೆಚ್ಚು ಔಪಚಾರಿಕವಾಗಿದೆ. ಕೃಷಿ ವಲಯದಲ್ಲಿನ ಸಾಂಸ್ಥಿಕ ಸಾಲವು ಕಳೆದ 2021ನೇ ಸಾಲಿನ ಹಣಕಾಸು ವರ್ಷದಲ್ಲಿ ರೂ. 15.8 ಲಕ್ಷ ಕೋಟಿ ಇತ್ತು, ಅದು 2022 ನೇ ಹಣಕಾಸು ವರ್ಷಕ್ಕೆ ರೂ.18.6 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದು ಕೃಷಿಗೆ ಸರ್ಕಾರ ನೀಡುತ್ತಿರುವ ಆರ್ಥಿಕ ಉತ್ತೇನವನ್ನು ತೋರಿಸುತ್ತದೆ ಎಂದರು.
ರೈತರು ಹಾಗೂ ಕೃಷಿ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗಳಂತಹ ಉಪಕ್ರಮಗಳನ್ನು ಹೆಚ್ಚು ಬೆಂಬಲಿಸಲಾಗಿದೆ. ಇದೇ ವೇಳೆ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಡಿಜಿಟಲ್ ಮೂಲಸೌಕರ್ಯದ ಪಾತ್ರವು ಹೆಚ್ಚಾಗಿದೆ.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ರೂಪಿಸಿದೆ. ಅದರ ಸಾರ್ಥಕತೆಯು ನಾಗರಿಕರಿಗೆ ಡಿಜಿಟಲ್ ಸೇವೆ ನೀಡುವುದು, ಡಿಜಿಟಲ್ ವ್ಯವಸ್ಥೆ ರೂಪಿಸುವುದು, ಡಿಜಿಟಲ್‌ನಲ್ಲಿ ಪ್ರಮಾಣಪತ್ರ ಮತ್ತು ದಾಖಲೆ ಸಂಗ್ರಹ ಹಾಗೂ ಇನ್ನು ಮುಂತಾದ ವಿಚಾರಗಳಲ್ಲಿ ಡಿಜಿಟಲ್ ವ್ಯವಸ್ಥೆ ಕಲ್ಪಿಸಿದರೆ ಮತ್ತು ವೇಗದ ಇಂಟರ್ನೆಟ್ ಒದಗಿಸುವುದರ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳಿದರು.