ಬಾಬಾ ಕಾ ಡಾಬಾ ಮಾಲೀಕ ಆತ್ಮಹತ್ಯೆ ಯತ್ನ: ಪತಿ ಮನಸ್ಸಲ್ಲೇನಿತ್ತು ತಿಳಿಯದೆಂದ ಪತ್ನಿ

ಬಾಬಾ ಕಾ ಡಾಬಾ ಮಾಲೀಕ ಆತ್ಮಹತ್ಯೆ ಯತ್ನ: ಪತಿ ಮನಸ್ಸಲ್ಲೇನಿತ್ತು ತಿಳಿಯದೆಂದ ಪತ್ನಿ

ನವದೆಹಲಿ: ದಕ್ಷಿಣ ದೆಹಲಿಯ 'ಬಾಬಾ ಕಾ ಡಾಬಾ'ದ ಮಾಲೀಕ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಪತ್ನಿ ಬಾದಾಮಿ ದೇವಿ, ಪತಿ ಏನು ಸೇವಿಸಿದ್ದಾರೆಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

'ಪತಿಗೆ ಏನಾಯಿತೆಂಬುದು ನನಗೆ ಗೊತ್ತಿಲ್ಲ. ನಾನು ಡಾಬಾದಲ್ಲಿದ್ದೆ. ಗುರುವಾರ ಸಂಜೆ 4ರ ಹೊತ್ತಿಗೆ ಅವರಿಗೆ ಆರೋಗ್ಯ ತೊಂದರೆ ಕಾಣಿಸಿಕೊಂಡು ಪ್ರಜ್ಞೆ ತಪ್ಪಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು' ಎಂದು ಹೇಳಿದ್ದಾರೆ.

ಈ ವೇಳೆ ಪತಿಯ ಆರೋಗ್ಯ ಸ್ಥಿತಿಯ ಬಗ್ಗೆ ತಮಗೆ ಯಾರೂ ಏನನ್ನು ಹೇಳಿಲ್ಲ ಎಂದು ಪತ್ನಿ ಅಳಲು ತೋಡಿಕೊಂಡಿದ್ದಾರೆ.

'ಪತಿಯ ಮನಸ್ಸಿನಲ್ಲೇನಿದೆ ಎಂಬುದು ಗೊತ್ತಿಲ್ಲ. ಮಾನಸಿಕ ತೊಂದರೆ ಕಾಡುತ್ತಿದೆಯೇ ಎಂಬುದು ತಿಳಿದಿಲ್ಲ' ಎಂದು ಹೇಳಿದ್ದಾರೆ.

81 ವರ್ಷದ ಕಾಂತಾ ಪ್ರಸಾದ್ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಕೋವಿಡ್ ಲಾಕ್‌ಡೌನ್‌ನಿಂದಾಗಿ ಹೋಟೆಲ್‌ನಲ್ಲಿ ಗ್ರಾಹಕರ ಕೊರತೆಯಿಂದಾಗಿ ಸಂಕಷ್ಟ ಎದುರಿಸಿದ್ದ ಕಾಂತಾ ಪ್ರಸಾದ್ ದಂಪತಿಯನ್ನು ಗೌರವ್ ವಾಸನ್ ಎಂಬ ಯೂಟ್ಯೂಬರ್ ಬೆಳಕಿಗೆ ತಂದಿದ್ದರು.

ಆದರೆ ತನ್ನ ಹೆಸರನ್ನು ಹೇಳಿಕೊಂಡು ಹಣ ಮಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಾಸನ್ ವಿರುದ್ದ ದೂರು ದಾಖಲಿಸಿದ್ದರು. ಬಳಿಕ ತಾವು ವಾಸನ್ ಬಗ್ಗೆ ಆ ರೀತಿ ಹೇಳಬಾರದಿತ್ತು. ಕೈ ಮುಗಿದು ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು.