ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧಕ್ಕಾಗಿ ರಾಷ್ಟ್ರೀಯ ಭದ್ರತೆಯಲ್ಲಿ ಭಾರತ ರಾಜಿ ಮಾಡಿಕೊಳ್ಳಲ್ಲ : ರಾಜನಾಥ್ ಸಿಂಗ್

ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧಕ್ಕಾಗಿ ರಾಷ್ಟ್ರೀಯ ಭದ್ರತೆಯಲ್ಲಿ ಭಾರತ ರಾಜಿ ಮಾಡಿಕೊಳ್ಳಲ್ಲ : ರಾಜನಾಥ್ ಸಿಂಗ್

ತಿರುವನಂತಪುರಂ: ಭಾರತವು ತನ್ನ ನೆರೆಹೊರೆಯವರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಲು ಮತ್ತು ನಿರ್ವಹಿಸಲು ಬಯಸುತ್ತದೆ. ಆದರೆ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಇಲ್ಲಿನ ಶಿವಗಿರಿ ಮಠದ 90ನೇ ವಾರ್ಷಿಕ ಯಾತ್ರೆಯಲ್ಲಿ ಮಾತನಾಡಿದ ಸಿಂಗ್, ನಾವು ಸ್ನೇಹಿತರನ್ನು ಬದಲಾಯಿಸಬಹುದು. ಆದರೆ ನಮ್ಮ ನೆರೆಹೊರೆಯವರನ್ನಲ್ಲ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೇಳಿಕೆಯನ್ನು ಸ್ಮರಿಸಿದರು.

ನಮ್ಮ ನೆರೆಹೊರೆಯವರೊಂದಿಗೆ ನಮಗೆ ಉತ್ತಮ ಮತ್ತು ಸೌಹಾರ್ದ ಸಂಬಂಧದ ಅಗತ್ಯವಿದೆ. ಆದಾಗ್ಯೂ, ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ನಾವು ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ರಾಷ್ಟ್ರೀಯ ಭದ್ರತೆಯ ವೆಚ್ಚದಲ್ಲಿ ನಾವು ಯಾರೊಂದಿಗೂ ಉತ್ತಮ ಸಂಬಂಧವನ್ನು ಬಯಸುವುದಿಲ್ಲ ಎಂದು ಹೇಳಿದರು.

ಕೇರಳ ಮೂಲದ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ಬೋಧನೆಗಳ ಬಗ್ಗೆ ಮಾತನಾಡಿದ ಸಿಂಗ್, 'ಉದ್ಯಮದ ಮೂಲಕ ಸಮೃದ್ಧಿ' ಆಲೋಚನೆಯೂ ಭಾರತೀಯ ಸರ್ಕಾರದ 'ಆತ್ಮ ನಿರ್ಭರ' ನೀತಿಯ ಆಧಾರವಾಗಿದೆ. ಇದರ ಪರಿಣಾಮವಾಗಿ ನಾವು ವಿಶ್ವದ ಅಗ್ರ 5 ಆರ್ಥಿಕತೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದ್ದೇವೆ ಎಂದು ಹೇಳಿದರು.

ಸಶಸ್ತ್ರ ಪಡೆಗಳ ಸಹಾಯ ಹಾಗೂ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಭಾರತದ ಗಡಿ (ದೇಹ) ರಕ್ಷಿಸಲು ಕೆಲಸ ಮಾಡುತ್ತಿರುವಾಗ, ಮಠದ ಸಂತರು ದೇಶದ ಆತ್ಮವನ್ನು ರಕ್ಷಿಸಲು ಶ್ರಮಿಸುತ್ತಿದ್ದಾರೆ ಎಂದು ಎಂದೇಳಿದರು.

ನೀವು ಮಾಡುತ್ತಿರುವ ಕೆಲಸವನ್ನು ನಾನು ಪ್ರಶಂಸಿಸುತ್ತೇನೆ. ದೇಹ ಮತ್ತು ಆತ್ಮ ಎರಡೂ ಸುರಕ್ಷಿತವಾಗಿದ್ದಾಗ ಮಾತ್ರ ನಾವು ರಾಷ್ಟ್ರವಾಗಿ ಉಳಿಯಬಹುದು. ಈ ವರ್ಷದ ವಾರ್ಷಿಕ ತೀರ್ಥಯಾತ್ರೆಯೂ ಯಶಸ್ವಿಯಾಗಲಿದೆ ಎಂದು ಹಾರೈಸಿದರು.

ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.