ಕಾರ್ ಬಾಂಬ್ ಸ್ಫೋಟಕ್ಕೆ 19 ಮಂದಿ ಬಲಿ..!
ನವದೆಹಲಿ: ಮಧ್ಯ ಸೊಮಾಲಿಯಾದ ಮಹಾಸ್ ಪಟ್ಟಣದಲ್ಲಿ ಕಾರ್ ಬಾಂಬ್ ಸ್ಫೋಟಕ್ಕೆ 19 ಮಂದಿ ಬಲಿಯಾಗಿದ್ದಾರೆ. ಸ್ಫೋಟಕಗಳನ್ನು ತುಂಬಿದ್ದ ವಾಹನಗಳೊಂದಿಗೆ ಉಗ್ರರು ದಾಳಿ ನಡೆಸಿದ್ದಾರೆ. ಅವಳಿ ಕಾರ್ ಬಾಂಬ್ ಸ್ಫೋಟಕ್ಕೆ 19 ಜನರು ಪ್ರಾಣ ಕಳೆದುಕೊಂಡಿದ್ದಾರೆಂದು ಹಿರಾನ್ ಪ್ರದೇಶದ ಸ್ಥಳೀಯ ಮಿಲಿಟಿಯ ಕಮಾಂಡರ್ ಹೇಳಿದ್ದಾರೆ
ಇನ್ನು ಈ ದುರ್ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ ಇದೆ.
'ಈ ಸ್ಫೋಟದಲ್ಲಿ ಭದ್ರತಾ ಪಡೆಗಳ ಸದಸ್ಯರು ಮತ್ತು ನಾಗರಿಕರು ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ' ಎಂದು ದಾಳಿ ನಡೆದ ಜಿಲ್ಲೆಯ ಮಹಾಸ್‌ನಲ್ಲಿ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿರುವ ಸಮುದಾಯದ ಮಿಲಿಷಿಯಾದ ನಾಯಕ ಮೊಹಮದ್ ಮೋಲಿಮ್ ಆದನ್ ಹೇಳಿದ್ದಾರೆ.
ಸಮುದಾಯದ ಮತ್ತೊಬ್ಬ ಮುಖಂಡ ಮೊಹಮ್ಮದ್ ಸುಲೇಮಾನ್ ಮಾತನಾಡಿದ್ದು, 'ಘಟನೆಯಲ್ಲಿ 52ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹೆಚ್ಚಿನವರನ್ನು ಚಿಕಿತ್ಸೆಗಾಗಿ ಮೊಗಾದಿಶುಗೆ ಸಾಗಿಸಲಾಗಿದೆ' ಎಂದಿದ್ದಾರೆ. ಜನನಿಬಿಡ ಪ್ರದೇಶವನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸಿದ್ದಾರೆಂದು ಸ್ಥಳೀಯ ಭದ್ರತಾ ಅಧಿಕಾರಿ ಹೇಳಿದ್ದಾರೆ. ಈ ದಾಳಿಯನ್ನು ಭಯೋತ್ಪಾದಕ ಸಂಘಟನೆ ಅಲ್-ಶಬಾಬ್‌ಗೆ ಸೇರಿದ ಜಿಹಾದಿ ಹೋರಾಟಗಾರರು ನಡೆಸಿದ್ದಾರೆಂದು ತಿಳಿದುಬಂದಿದೆ.
ಮಹಾಸ್ ಪೊಲೀಸ್ ಕಮಾಂಡರ್ ಉಸ್ಮಾನ್ ನೂರ್ ಮಾತನಾಡಿ, 'ಮಹಾಸ್‌ನಲ್ಲಿರುವ ಜಿಲ್ಲಾಡಳಿತ ಭವನದ ರೆಸ್ಟೋರೆಂಟ್ ಬಳಿ ಈ ಸ್ಫೋಟ ಸಂಭವಿಸಿದೆ. ಈ ದಾಳಿಯಲ್ಲಿ ಸಾವನ್ನಪ್ಪಿದವರು ಅಮಾಯಕರು. ನಾಗರಿಕರನ್ನು ಹೆದರಿಸಲು ಉಗ್ರರು ಸ್ಫೋಟ ನಡೆಸಿದ್ದಾರೆ, ಆದರೆ ಇಂತಹ ಘಟನೆಗಳಿಂದ ಜನರನ್ನು ಹೆದರಿಸಲು ಸಾಧ್ಯವಿಲ್ಲ'ವೆಂದು ಹೇಳಿದ್ದಾರೆ.ಸಂಯೋಜಿತ ಉಗ್ರಗಾಮಿ ಗುಂಪಿನ ವಿರುದ್ಧ ಕಳೆದ ವರ್ಷ ದೊಡ್ಡ ಆಕ್ರಮಣ ಪ್ರಾರಂಭಿಸಲಾದ ಹಿರಾನ್‌ನ ಪಟ್ಟಣವಾದ ಮಹಾಸ್‌ನಲ್ಲಿ ಬುಧವಾರ ಸ್ಫೋಟಕಗಳನ್ನು ತುಂಬಿದ 2 ಕಾರುಗಳನ್ನು ಏಕಕಾಲಕ್ಕೆ ಸ್ಫೋಟಿಸಲಾಗಿದೆ.