ಹೊಸ ವರ್ಷಕ್ಕೆ ನಾಸಿಕ ಲಸಿಕೆ: ಜನವರಿ 4ನೇ ವಾರ ಮಾರುಕಟ್ಟೆಗೆ ಬಿಡುಗಡೆ, ಡೋಸ್ಗೆ 800 ರೂ.

ನವದೆಹಲಿ: ಕೋವಿಡ್ ಸಾಂಕ್ರಾಮಿಕತೆಗೆ ಕಡಿವಾಣ ಹಾಕಲು ಬೂಸ್ಟರ್ ಡೋಸ್ ಆಗಿ ಅಭಿವೃದ್ಧಿಪಡಿಸಲಾಗಿರುವ ಮೂಗಿನ ಮೂಲಕ ನೀಡಲಾಗುವ ಭಾರತ್ ಬಯೋಟೆಕ್ನ ಇನ್ಕೋವ್ಯಾಕ್ ಲಸಿಕೆ ಜನವರಿ ನಾಲ್ಕನೇ ವಾರ ಮಾರುಕಟ್ಟೆಗೆ ಬರಲಿದೆ. ಈ ನಾಸಿಕ ಲಸಿಕೆ ಪಡೆಯಲು ಕೋವಿನ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಭಾರತ್ ಬಯೋಟೆಕ್ ಮಂಗಳವಾರ ಪ್ರಕಟಿಸಿದೆ.
ಸರ್ಕಾರಕ್ಕೆ 325 ರೂ. ನಿಗದಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೊಡ್ಡ ಪ್ರಮಾಣದಲ್ಲಿ ಖರೀದಿಸಿದರೆ ಪ್ರತಿ ಡೋಸ್ಗೆ 325 ರೂಪಾಯಿಯಂತೆ ಒದಗಿಸಲಾಗುವುದೆಂದು ದೇಶದ ಪ್ರಮುಖ ಔಷಧ ತಯಾರಕ ಕಂಪನಿಗಳಲ್ಲಿ ಒಂದಾದ ಭಾರತ್ ಬಯೋಟೆಕ್ ಹೇಳಿದೆ.
18 ವರ್ಷ ಮೇಲ್ಪಟ್ಟವರಿಗೆ: ಇನ್ಕೋವ್ಯಾಕ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಆಗಿ ನೀಡಲು ಬಿಡುಗಡೆ ಮಾಡಲಾಗುತ್ತದೆ. ಇನ್ಕೋವ್ಯಾಕ್, ಪ್ರಾಥಮಿಕ 2-ಡೋಸ್ ಆಗಿ ನೀಡಲು ಹಾಗೂ ವಿಜಾತೀಯ ಡೋಸ್ ಆಗಿಯೂ ನೀಡಲು ಒಪ್ಪಿಗೆ ಸಿಕ್ಕಿರುವ ಜಗತ್ತಿನ ಪ್ರಥಮ ನಾಸಿಕ ಲಸಿಕೆಯಾಗಿದೆ. ದೇಶದಾದ್ಯಂತ 14 ಸ್ಥಳಗಳಲ್ಲಿ 3ನೇ ಹಂತದ ಪರೀಕ್ಷೆ ಹಾಗೂ 9 ಸ್ಥಳಗಳಲ್ಲಿ ವಿಜಾತೀಯ ಪರೀಕ್ಷೆ ನಡೆಸಲಾಗಿದೆ ಎಂದು ಕಂಪನಿ ತಿಳಿಸಿದೆ. ಅಮೆರಿಕದ ಸೇಂಟ್ ಲೂಯಿಸ್ನ ವಾಷಿಂಗ್ಟನ್ ಯುನಿವರ್ಸಿಟಿ ಪಾಲುದಾರಿಕೆಯಲ್ಲಿ ಈ ವ್ಯಾಕ್ಸಿನ್ ಅಭಿವೃದ್ಧಿಪಡಿಸಲಾಗಿದೆ.
ಚೀನಾ ಗಡಿ ಸಂಪೂರ್ಣ ಮುಕ್ತ: ಸಾಂಕ್ರಾಮಿಕತೆ ನಿಯಂತ್ರಣಕ್ಕೆ ಅನುಸರಿಸುತ್ತಿದ್ದ ಶೂನ್ಯ-ಕೋವಿಡ್ ನೀತಿಯ ಕೊನೆಯ ಅಂಶವನ್ನೂ ಚೀನಾ ಸಡಿಲಿಸಿದ್ದು ಅಂತಾರಾಷ್ಟ್ರೀಯ ಪ್ರಯಾಣಿಕರ ಅನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ದೇಶಕ್ಕೆ ಬರುವವರು, ಹೊರಡುವುದಕ್ಕಿಂತ 48 ಗಂಟೆ ಮುಂಚೆ ಪಡೆದ ಕೋವಿಡ್ ನೆಗೆಟಿವ್ ಟೆಸ್ಟ್ ವರದಿಯನ್ನು ಸಲ್ಲಿಸಿದರೆ ಸಾಕು ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್ಎಚ್ಸಿ) ಸೋಮವಾರ ತಿಳಿಸಿದೆ. ದೇಶಕ್ಕೆ ಬರುವ ಪ್ರಯಾಣಿಕರು ಜನವರಿ 8ರಿಂದ ಕ್ವಾರಂಟೈನ್ಗೆ ಒಳಪಡುವ ಅಗತ್ಯವಿಲ್ಲ ಎಂದೂ ಅದು ಹೇಳಿದೆ. ಇದರೊಂದಿಗೆ ಮೂರು ವರ್ಷಗಳಿಂದ ಬಾಹ್ಯ ಜಗತ್ತಿನಿಂದ ಪ್ರತ್ಯೇಕವಾಗಿದ್ದ ಸ್ವಯಂ-ಘೋಷಿತ ನೀತಿಯಿಂದ ಚೀನಾ ಹೊರ ಬಂದಂತಾಗಿದೆ.
ಡ್ರಿಲ್ ಪರಿಶೀಲಿಸಿದ ಸಚಿವ: ಕೋವಿಡ್ ಪ್ರಕರಣಗಳಲ್ಲಿ ಸಂಭಾವ್ಯ ಅಪಾಯಕಾರಿ ಏರಿಕೆಯನ್ನು ಎದುರಿಸಲು ದೇಶದ ಆರೋಗ್ಯ ವ್ಯವಸ್ಥೆಯ ಸನ್ನದ್ಧತೆಯನ್ನು ಪರಿಶೀಲಿಸಲು ಮಂಗಳವಾರ ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಸನ್ನದ್ಧತೆ ತಾಲೀಮು ನಡೆಸಲಾಯಿತು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಮತ್ತು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರು ಭಾಗವಹಿಸಿ ಪ್ರಕ್ರಿಯೆಯನ್ನು ಪರಿಶೀಲಿಸಿದರು. ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮಾಂಡವೀಯ ಉಸ್ತುವಾರಿಯಲ್ಲಿ ಡ್ರಿಲ್ ನಡೆಯಿತು. ಇಂಥ ಚಟುವಟಿಕೆಗಳಿಂದ ನಮ್ಮ ಸನ್ನದ್ಧತೆಗೆ ನೆರವಾಗುತ್ತದೆ. ಏನಾದರೂ ಕೊರತೆಗಳಿದ್ದಲ್ಲಿ ಸರಿಪಡಿಸಲು ಆಗುತ್ತದೆ ಎಂದು ಮಾಂಡವೀಯ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಪದಾಧಿಕಾರಿಗಳ ಜೊತೆ ಸೋಮವಾರ ನಡೆಸಿದ ಸಭೆಯಲ್ಲಿ ಹೇಳಿದ್ದರು. ಎಲ್ಲ ಜಿಲ್ಲೆಗಳಲ್ಲಿ ಆರೋಗ್ಯ ಸೌಲಭ್ಯಗಳ ಲಭ್ಯತೆ, ಐಸೋಲೇಶನ್ ಬೆಡ್ಗಳ ಸಾಮರ್ಥ್ಯ, ಆಮ್ಲಜನಕ-ಬೆಂಬಲಿತ ಹಾಸಿಗೆ, ಐಸಿಯು ಬೆಡ್ ಮತ್ತು ವೆಂಟಿಲೇಟರ್ಯುುಕ್ತ ಹಾಸಿಗೆಗಳ ಲಭ್ಯತೆಯನ್ನು ಪರಿಶೀಲಿಸಲು ಗಮನಹರಿಸಲಾಗುವುದು. ವೈದ್ಯಕೀಯ ಸಿಬ್ಬಂದಿ ಲಭ್ಯತೆ ಖಾತರಿಯನ್ನೂ ಪರಿಶೀಲಿಸಲಾಗುತ್ತದೆ.
ರಸ್ತೆ ಬದಿಗಳಲ್ಲಿ ಸಾಲು ಸಾಲು ಶವ!: ಒಮಿಕ್ರಾನ್ ಪ್ರಭೇದದ ಬಿಎಫ್.7 ಉಪತಳಿಯ ಹಾವಳಿಯಿಂದ ಪ್ರಸಕ್ತ ಅಲೆ ಕಾಡುತ್ತಿರುವ ಚೀನಾದಲ್ಲಿ ಸೋಂಕಿತರು ಹಾಗೂ ಮೃತರ ಸಂಖ್ಯೆ ಏರುತ್ತಲೇ ಇದೆ. ಆಸ್ಪತ್ರೆಗಳು ತುಂಬಿ ತುಳುಕಾಡುತ್ತಿದ್ದು ಹಾಸಿಗೆಗಳು ಹಾಗೂ ಔಷಧಗಳ ಕೊರತೆಯಿಂದ ಬಳಲುತ್ತಿವೆ. ಶವಾಗಾರಗಳಲ್ಲಿ ಹೆಣಗಳು ಕೊಳೆಯುತ್ತಿರುವುದಲ್ಲದೆ ಅಲ್ಲಿ ಸ್ಥಳ ಸಾಕಾಗದೆ ರಸ್ತೆ ಬದಿಗಳಲ್ಲೂ ಸಾಲು ಸಾಲು ಹೆಣಗಳನ್ನು ಇಡಲಾಗುತ್ತಿದ್ದು ಪರಿಸ್ಥಿತಿಯ ಗಂಭೀರತೆಗೆ ಕನ್ನಡಿ ಹಿಡಿದಿದೆ.