ಇಂದಿನಿಂದ ಸಂಸತ್​​ ಚಳಿಗಾಲ ಅಧಿವೇಶನ; 29ಕ್ಕೂ ಹೆಚ್ಚು ಬಿಲ್​​ ಮಂಡನೆ ಸಾಧ್ಯತೆ

ಇಂದಿನಿಂದ ಸಂಸತ್​​ ಚಳಿಗಾಲ ಅಧಿವೇಶನ; 29ಕ್ಕೂ ಹೆಚ್ಚು ಬಿಲ್​​ ಮಂಡನೆ ಸಾಧ್ಯತೆ

ಪ್ರಸಕ್ತ ವರ್ಷದ ಸಂಸತ್ತು ಚಳಿಗಾಲ ಅಧಿವೇಶನ ಇಂದಿನಿಂದ ಶರುವಾಗಲಿದೆ. ಡಿಸೆಂಬರ್​ 23ರ ವರೆಗೆ ನಡೆಯಲಿರೋ ಅಧಿವೇಶನದಲ್ಲಿ 29ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗೋ ಸಾಧ್ಯತೆ ಇದೆ. ಪ್ರಮುಖವಾಗಿ ಕೃಷಿ ಕಾನೂನು ರದ್ದು, ಕ್ರಿಪ್ಟೋ ಕರೆನ್ಸಿ ನಿಯಂತ್ರಣ, ಕೆಲ ಸರ್ಕಾರಿ ಬ್ಯಾಂಕ್​ ಖಾಸಗೀಕರಣ, ಡ್ರಗ್ಸ್​​ ನಿಯಂತ್ರಣ ಸೇರಿ ಹಲವು ಮಹತ್ವದ ಮಸೂದೆಗಳು ಈ ಬಾರಿ ಮಂಡನೆಯಾಗ್ತಿವೆ.

ಈ ಸಂಬಂಧ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ವ್ಯವಸ್ಥಿತ ಅಧಿವೇಶನ ನಡೆಸುವುದಕ್ಕಾಗಿ ಸರ್ವಪಕ್ಷಗಳ ಸಾಂಪ್ರದಾಯಿಕ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಆದರೆ ಪ್ರಧಾನಿ ಮೋದಿ ಸಭೆಗೆ ಗೈರಾಗಿದ್ದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮತ್ತು ಸಚಿವ ಪಿಯೂಷ್​ ಗೋಯಲ್​ ಸರ್ಕಾರದಿಂದ ಹಾಜರಾಗಿದ್ದರು. ಮೋದಿ ಗೈರಾಗಿರುವ ಬಗ್ಗೆ ರಾಜ್ಯಸಭೆ ನಾಯಕ ಮಲ್ಲಿಕಾರ್ಜುನ್​ ಖರ್ಗೆ ಸೇರಿ ವಿಪಕ್ಷ ನಾಯಕರು ಖಂಡಿಸಿದರು.

ಇನ್ನು ಪ್ರಮುಖವಾಗಿ ಮೂರು ಕೃಷಿ ಕಾಯಿದೆಗಳ ರದ್ದತಿ ಮಸೂದೆ, ಕ್ರಿಪ್ರೋ ಕರೆನ್ಸಿ ಅಧೀಕೃತ ನಿಯಂತ್ರಣ ಮಸೂದೆ ಬಗ್ಗೆಯೂ ಕೇಂದ್ರ ಮಸೂದೆ ಮಂಡಿಸುವುದಕ್ಕಾಗಿ ಅಣಿಯಾಗಿದೆ. ಹೀಗಾಗಿ ಇಡೀ ದೇಶದ ಚಿತ್ತ ಚಳಿಗಾಲದ ಅಧಿವೇಶನದತ್ತ ನೆಟ್ಟಿದೆ.

ಅನ್ನದಾತರಿಗೆ ಮಣಿದ ಕೇಂದ್ರ
ಕೇಂದ್ರದ ನೂತನ ಕೃಷಿ ಕಾನೂನುಗಳನ್ನ ವಿರೋಧಿಸಿ ಇಡೀ ದೇಶದ ಗಡಿಗಳಲ್ಲಿ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ಅನ್ನದಾತನ ಆಕ್ರೋಶಕ್ಕೆ ಕೊನೆಗೂ ಕೇಂದ್ರ ಮಣಿದಿದೆ. ಹೀಗಾಗಿ ನವೆಂಬರ್​ 19ಕ್ಕೆ ಪ್ರಧಾನಿ ನರೇಂದ್ರ ಮೋದಿ ನೂತನ ಮೂರು ಕೃಷಿ ಕಾನೂನುಗಳನ್ನ ರದ್ದುಗೊಳಿಸುವುದಾಗಿ ಘೊಷಿಸಿದ್ದರು. ಇದನ್ನ ಶ್ಲಾಘಿಸಿದ ರೈತ ಸಂಘಟನೆಗಳು ಸಾಂವಿಧಾನಿಕ ರದ್ದತಿ ಘೋಷಣೆ ಆಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಅಂತಲೂ ಎಚ್ಚರಿಸಿದ್ದರು. ಈ ಬೆನ್ನಲ್ಲೆ ಕೇಂದ್ರ ಕೃಷಿ ಕಾನೂನುಗಳ ರದ್ದತಿ ಬಗ್ಗೆ ಮಹತ್ವದ ಮಸೂದೆ ಮಂಡಿಸುವುದಕ್ಕೆ ಸಿದ್ಧವಾಗಿದೆ.

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಅಂತರರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದ್ದ ಕ್ರಿಪ್ಟೋ ಕರೆನ್ಸಿ ಬಗ್ಗೆಯೂ ಕೆಂದ್ರ ಮಹತ್ವದ ಮಸೂದೆ ಮಂಡಿಸುವ ಸಾಧ್ಯತೆ ಇದೆ. ದೇಶದಲ್ಲಿ ಬಿಟ್​ ಕಾಯಿನ್​ ಸೇರಿ ಕ್ರಿಪ್ಟೋ ಕರೆನ್ಸಿ ಮೇಲೆ ರಿಸರ್ವ್​ ಬ್ಯಾಂಕ್​ ವಿಧಿಸಿದ್ದ ನಿಷೇಧವನ್ನ ಸುಪ್ರೀಂ ಕೋರ್ಟ್​ ತೆರವುಗೊಳಿಸಿದ್ದರೂ ಡಿಜಿಟಲ್​ ಕರೆನ್ಸಿ ವಹಿವಾಟಿಗೆ ಯಾವುದೇ ಮಾರ್ಗಸೂಚಿಗಳಿಲ್ಲ. ಹೀಗಾಗಿ ಈ ಬಗ್ಗೆ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಕ್ರಿಪ್ಟೋ ಅಧೀಕೃತ ನಿಯಂತ್ರಣ ಮಸೂದೆಗಾಗಿ ಅಣಿಯಾಗಿದೆ.

ಇನ್ನು ಸಾರ್ವಜನಿಕ ವಲಯದ ಎರಡೂ ಬ್ಯಾಂಕ್​ಗಳನ್ನ ಖಾಸಗೀಕರಣ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಹೀಗಾಗಿ 1970-1978ರ ಬ್ಯಾಂಕಿಂಗ್​ ನಿಯಂತ್ರಣ ಕಾಯ್ದೆಯ ತಿದ್ದುಪಡಿ ಮಸೂದೆ ಮಂಡಿಸಬಹುದು. ಹಾಗೇ ಮಾದಕ ವಸ್ತಗಳ ನಿಯಂತ್ರಣ ಮಸೂದೆ-2021 ಮಂಡಿಸಲಿದೆ. ಕೇಂದ್ರೀಯ ಜಾಗೃತ ದಳ ಆಯೋಗ ತಿದ್ದುಪಡಿ-2021 ಬಿಲ್​ ಮಂಡಿಸುವ ಸಾಧ್ಯತೆ ಇದೆ. ಹಾಗೇ ದೆಹಲಿಯ ವಿಶೇಷ ಪೊಲೀಸ್​​ ಕಾಯ್ದೆ ತಿದ್ದುಪಡಿ ಮಸೂದೆ-2021 ಮಂಡಿಸುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ತ್ರಿಪುರಾದಲ್ಲಿ ಮೀನುಗಾರರನ್ನ ಎಸ್​​ಟಿಗೆ ಸೇರಿಸೋ ಸಂಬಂಧ ತಿದ್ದುಪಡಿ ಬಿಲ್​ ಮಂಡನೆ ಆಗುವ ಸಾಧ್ಯತೆ ಇದೆ. ಒಟ್ಟು 29ಕ್ಕೂ ಅಧಿಕ ಬಿಲ್​ಗಳು ಈ ಬಾರಿ ಅಧಿವೇಶನದಲ್ಲಿ ಮಂಡನೆಯಾಗುತ್ತವೆ ಎಂದು ಹೇಳಲಾಗುತ್ತಿದೆ.

ವಿಪಕ್ಷಗಳಿಂದ ಪ್ರತಿಭಟನೆಯ ಬಿಸಿ
ಇಂದು ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಕೇಂದ್ರ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಎಲ್ಲ ವಿಪಕ್ಷಗಳು ಭಾರೀ ಸಿದ್ಧತೆ ನಡೆಸಿವೆ. ಇಂಧನ ಬೆಲೆ ಏರಿಕೆ, ಹಣದುಬ್ಬರ, ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಹತ್ಯೆ, ಲಖೀಂಪುರ ಖೇರಿ ದುರ್ಘಟನೆ, ಸೇರಿ ಹಲವು ವಿಚಾರಗಳನ್ನ ಮುಂದಿಟ್ಟುಕೊಂಡು ಕೇಂದ್ರವನ್ನ ತಾರಟೆಗೆ ತೆಗೆದುಕೊಳ್ಳೋದಕ್ಕೆ ವಿಪಕ್ಷಗಳು ತುದಿಗಾಲಲ್ಲಿ ನಿಂತುಕೊಂಡಿವೆ.