2-ಎ ಮೀಸಲಾತಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಮಧ್ಯಂತರ ಆದೇಶ
ಬೆಂಗಳೂರು: 'ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ನೀಡಬಾರದು ಮತ್ತು ಮೀಸಲು ಪ್ರವರ್ಗ ಮಾರ್ಪಾಡು ಮಾಡುವಂತೆ ಕೋರಿ ಯಾವುದೇ ಜಾತಿ, ಉಪಜಾತಿ, ಸಮುದಾಯ ಬುಡಕಟ್ಟುಗಳು ಸಲ್ಲಿಸುವ ವೈಯಕ್ತಿಕ ಬೇಡಿಕೆಗಳನ್ನು ರಾಜ್ಯ ಸರ್ಕಾರ ಪ್ರೋತ್ಸಾಹಿಸದಂತೆ ತಡೆ ನೀಡಬೇಕು' ಎಂಬ ಮಧ್ಯಂತರ ಮನವಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ಈ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಮುಂದಿನ ವಿಚಾರಣೆವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹೀಗಾಗಿ, ಮೀಸಲು ಹಂಚಿಕೆಗೆ ಸಂಬಂಧಿಸಿದಂತೆ ಪ್ರವರ್ಗ 2-ಎ ಗೆ ಸೇರ್ಪಡೆ ಮಾಡುವ ಅಥವಾ ಹೊಸದಾಗಿ 2-ಸಿ, 2-ಡಿ ಪ್ರವರ್ಗ ಸೃಷ್ಟಿಸಲು ಸರ್ಕಾರ ಕೈಗೊಂಡಿರುವ ನಿರ್ಣಯದ ಮುಂದಿನ ಪ್ರಕ್ರಿಯೆಗೆ ಈಗ ತಾತ್ಕಾಲಿಕ ತಡೆ ಬಿದ್ದಂತಾಗಿದೆ.
ಈ ಸಂಬಂಧ ಬೆಂಗಳೂರಿನ ಜ್ಞಾನಭಾರತಿಯ ಮೃತ್ಯುಂಜಯ ನಗರದ ನಿವಾಸಿ ಡಿ.ಜಿ ರಾಘವೇಂದ್ರ ಬಿನ್ ಸೂರ್ಯ ದೇವಾಡಿಗ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ದಿನದ ಕಲಾಪ ಮುಗಿಯುವಾಗ ಸಂಜೆ 5.45 ರಲ್ಲಿ ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ಅವರು, 'ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ನೀಡಬೇಕು ಎಂಬ ಬೇಡಿಕೆಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ. ಈ ವರದಿಯನ್ನು ರಾಜ್ಯ ಸರ್ಕಾರ ಇನ್ನೂ ಕೋರ್ಟ್ಗೆ ಸಲ್ಲಿಸಿಲ್ಲ' ಎಂದು ಆಕ್ಷೇಪಿಸಿದರು.
ಇದಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ, 'ವರದಿ ಸರ್ಕಾರದ ಪರಿಶೀಲನೆಯಲ್ಲಿದೆ. ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ವರದಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು. ಹಾಗಾಗಿ, ತಡೆ ನೀಡಬಾರದು' ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಯಾಡಿದ ರವಿವರ್ಮ ಕುಮಾರ್, 'ಸರ್ಕಾರ ಸಮಯ ತೆಗೆದುಕೊಳ್ಳಲು ನಮ್ಮ ತಕರಾರಿಲ್ಲ, ಆದರೆ ಕೆಲವು ಸಮುದಾಯಗಳು ಸರ್ಕಾರದ ಮೇಲೆ ಅಸಾಂವಿಧಾನಿಕ ಬೇಡಿಕೆಯ ಈಡೇರಿಕೆಗಾಗಿ ಒತ್ತಡ ಹೇರುತ್ತಿವೆ. ಆದಕಾರಣ ಈ ವಿಷಯದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ಅದೇಶಿಸಬೇಕು' ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಇದೇ 30ಕ್ಕೆ ನಿಗದಿಪಡಿಸಿ ಅಲ್ಲಿಯವರೆಗೂ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಆದೇಶಿಸಿತು. ಅರ್ಜಿದಾರರ ಪರ ವಕೀಲ ಎಚ್.ವಿ.ಮಂಜುನಾಥ ಹಾಜರಿದ್ದರು.